ಬೆಂಗಳೂರು: 'ಏರೋ ಇಂಡಿಯಾ-2025' ವೈಮಾನಿಕ ಪ್ರದರ್ಶನದಲ್ಲಿ ಇಂದು ವಿಶೇಷ ಕೌಶಲ್ಯ ಪ್ರದರ್ಶಿಸಿದ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡದಲ್ಲಿ ಬೆಂಗಳೂರಿನವರೇ ಆದ ವಿಂಗ್ ಕಮಾಂಡರ್ ಅರ್ಜುನ್ ಕೆ.ಪಟೇಲ್ ಗಮನ ಸೆಳೆದಿದ್ದಾರೆ. ಜಯಮಹಲ್ ನಿವಾಸಿಯಾಗಿರುವ ಅರ್ಜುನ್ ಕೆ.ಪಟೇಲ್, ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡದ 9 ಜನ ಪೈಲಟ್‌ಗಳಲ್ಲಿ ಒಬ್ಬರು ಎಂಬುದು ವಿಶೇಷ.
2004ರಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಸೇರ್ಪಡೆಗೊಂಡಿರುವ 39 ವರ್ಷದ ಅರ್ಜುನ್ ಕೆ.ಪಟೇಲ್, 2,100 ಗಂಟೆಗಳ ವಿಮಾನ ಹಾರಾಟದ ಅನುಭವ ಹೊಂದಿದ್ದಾರೆ. ಸೋವಿಯತ್ ಮೂಲದ MiG-21 ಮತ್ತು MiG-27 ಸೇರಿದಂತೆ ಕೆಲ ಅತ್ಯಂತ ಪ್ರಬಲ ಯುದ್ಧ ವಿಮಾನಗಳನ್ನು ಹಾರಿಸಿರುವ ಅನುಭವ ಕೂಡ ಇವರಿಗಿದೆ. ಭಾರತದಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿರುವ ತೇಜಸ್ ಲಘು ಯುದ್ಧ ವಿಮಾನ (LCA)ದಲ್ಲಿಯೂ ಪರಿಣತಿ ಹೊಂದಿದ್ದಾರೆ. ಇಂದಿನ ಪ್ರದರ್ಶನದಲ್ಲಿ ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡದ (SKAT) ಭಾಗವಾಗಿದ್ದ ಅರ್ಜುನ್, ಸೂರ್ಯ ಕಿರಣ್-5 (ಎಡ ಹೊರಭಾಗದ) ವಿಮಾನವನ್ನು ಮುನ್ನಡೆಸಿದರು.
1986ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಅರ್ಜುನ್, ಆರ್.ಟಿ.ನಗರದ ಪ್ರೆಸಿಡೆನ್ಸಿ ಶಾಲೆ ಮತ್ತು ಸೇಂಟ್ ಜೋಸೆಫ್ಸ್ ಪ್ರಿ-ಯೂನಿವರ್ಸಿಟಿ ಕಾಲೇಜಿನಲ್ಲಿ ವ್ಯಾಸಂಗ ಪೂರ್ಣಗೊಳಿಸಿದ್ದರು. ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಖಡಕ್ವಾಸ್ಲಾದಲ್ಲಿ ತರಬೇತಿ ಪೂರ್ಣಗೊಳಿಸಿದ ನಂತರ, ಹೈದರಾಬಾದ್ ಸಮೀಪದ ದುಂಡಿಗಲ್‌ನಲ್ಲಿರುವ ವಾಯುಪಡೆ ಅಕಾಡೆಮಿಯಲ್ಲಿ ಫ್ಲೈಯಿಂಗ್ ತರಬೇತಿ ನೆಡಸಿದ್ದರು. ಇದಾದ ನಂತರ ಪಟೇಲ್ ಅವರನ್ನು ಭಾರತೀಯ ವಾಯುಪಡೆಯ (ಐಎಎಫ್) ಫೈಟರ್ ಸ್ಟ್ರೀಮ್‌ಗೆ ನಿಯೋಜಿಸಲಾಯಿತು. ಕಠಿಣ ಆಯ್ಕೆ ಪ್ರಕ್ರಿಯೆಯ ಬಳಿಕ ಅರ್ಜುನ್, ಸೂರ್ಯ ಕಿರಣ್ ಏರೋಬ್ಯಾಟಿಕ್ ಟೀಂ (SKAT)ನಲ್ಲಿ ಸ್ಥಾನ ಗಳಿಸಿದ್ದಾರೆ.
ಇದನ್ನೂ ಓದಿ: ಏರೋ ಇಂಡಿಯಾ 2025: ತಾಂತ್ರಿಕ ಸಾಮರ್ಥ್ಯದ ಮಹಾಕುಂಭ ಎಂದ ರಾಜನಾಥ್ ಸಿಂಗ್ - AERO INDIA 2025