ಸ್ಯಾಂಡಲ್ವುಡ್ನ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 39ನೇ ವಸಂತಕ್ಕೆ ಕಾಲಿಟ್ಟ ಕೆಜಿಎಫ್ ಸ್ಟಾರ್ಗೆ ಕುಟುಂಬಸ್ಥರು, ಆಪ್ತರು, ಸಿನಿಸ್ನೇಹಿತರೂ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಬರ್ತ್ಡೇ ಸ್ಪೆಷಲ್ ಆಗಿ 'ಟಾಕ್ಸಿಕ್' ಸಿನಿಮಾದ ಅಪ್ಡೇಟ್ಸ್ ಕೂಡಾ ಸಿಗಲಿದ್ದು, ಅಭಿಮಾನಿಗಳು ಕಾತರರಾಗಿದ್ದಾರೆ.
8 ವರ್ಷಗಳಲ್ಲಿ 2 ಸಿನಿಮಾ: ಧಾರವಾಹಿಗಳ ಮೂಲಕ ಕಿರುತೆರೆಯಲ್ಲಿ ಜನಪ್ರಿಯರಾಗಿದ್ದ ಯಶ್ 2007ರಲ್ಲಿ ಹಿರಿತೆರೆ ಪ್ರವೇಶಿಸಿದರು. ಜಂಬದ ಹುಡುಗಿ ಮೂಲಕ ಸಿನಿ ವೃತ್ತಿಜೀವನ ಆರಂಭಿಸಿದ ನಟ ಈವರಗೆ 18 ಚಿತ್ರಗಳಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರೆ, 3 ಸಿನಿಮಾಗಳಲ್ಲಿ ಅತಿಥಿ ಪಾತ್ರ ವಹಿಸಿದ್ದಾರೆ. ಮುಖ್ಯಭೂಮಿಕೆಯಲ್ಲಿ ಬರುತ್ತಿರುವ ಮುಂದಿನ ಚಿತ್ರ ವರ್ಷಗಳವರೆಗೆ #YASH19 ಎಂದು ಟ್ರೆಂಡ್ ಆಗಿದ್ದು ನಿಮಗೆ ತಿಳಿದೇ ಇದೆ. 2023ರ ಡಿಸೆಂಬರ್ಗೆ ಟಾಕ್ಸಿಕ್ ಅಧಿಕೃತವಾಗಿ ಘೋಷಣೆಯಾಗಿ, ಸದ್ಯ ನಿರ್ಮಾಣ ಹಂತದಲ್ಲಿದೆ. 2007ರಿಂದ 2016ರವರೆಗೆ ಒಂದಾದ ಬಳಿಕ ಒಂದರಂತೆ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಯಶ್ ಅವರಿಂದ ಕಳೆದ 8 ವರ್ಷಗಳಲ್ಲಿ ಬಂದಿದ್ದು ಎರಡೇ ಎರಡು ಸಿನಿಮಾ. ಆದ್ರೆ ದಕ್ಕಿಸಿಕೊಂಡ ಜನಪ್ರಿಯತೆ ಮಾತ್ರ ವರ್ಣನಾತೀತ. 2016ರಲ್ಲಿ ಬಂದ ಸಂತು ಸ್ಟ್ರೇಟ್ ಫಾರ್ವರ್ಡ್ ಸಿನಿಮಾದ ಬಳಿಕ ಅಂದರೆ ಕಳೆದ 8 ವರ್ಷಗಳಲ್ಲಿ ಕೆಜಿಎಫ್ 1, ಕೆಜಿಎಫ್ 2 ಸದ್ದು ಮಾಡಿದೆ. ಏಪ್ರಿಲ್ 10ರಂದು ಅವರ ಮುಂದಿನ ಚಿತ್ರ 'ಟಾಕ್ಸಿಕ್' ತೆರೆಕಾಣಲಿದೆ.
ಟಾಕ್ಸಿಕ್ ಮೊದಲ ಪೋಸ್ಟರ್: ತಮ್ಮ ಜನ್ಮದಿನಕ್ಕೂ ಮುನ್ನ, ಜನವರಿ 6ರಂದು ನಟ ತಮ್ಮ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್'ನ ಮೊದಲ ಪೋಸ್ಟರ್ ಅನ್ನು ಅನಾವರಣಗೊಳಿಸಿದ್ದರು. ಪೋಸ್ಟರ್ ಮೂಲಕ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದ್ದರು.
ಇದನ್ನೂ ಓದಿ:'ಸಂಜು ವೆಡ್ಸ್ ಗೀತಾ 2 ಬಿಡುಗಡೆಯಾಗುತ್ತಿರುವುದು ಗೊತ್ತಿರಲಿಲ್ಲ': ಮದುವೆ, ಸಿನಿಮಾ, ರಾಜಕೀಯದ ಬಗ್ಗೆ ರಮ್ಯಾ ಮಾತು
ವೆಂಕಟ್ ಕೆ.ನಾರಾಯಣ್ ಅವರ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ರಾಕಿಂಗ್ ಸ್ಟಾರ್ನ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಅಡಿ ಬಿಗ್ ಬಜೆಟ್ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ಕೋಟ್ಯಂತರ ಸಿನಿಪ್ರಿಯರಿಗೆ ರೋಮಾಂಚಕ ಸಿನಿ ಅನುಭವ ಒದಗಿಸುವ ಭರವಸೆ ಇದೆ. ಪವರ್ಫುಲ್ ಸ್ಟೋರಿ ಟೆಲ್ಲಿಂಗ್ಗೆ ಹೆಸರುವಾಸಿಯಾಗಿರುವ ಗೀತು ಮೋಹನ್‌ದಾಸ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಇಂದು ಅಭಿಮಾನಿಗಳಿಗೆ ಸಿಗೋದಿಲ್ಲ ಯಶ್:ಡಿಸೆಂಬರ್ 31ರಂದು ನಟ ಯಶ್ ತಮ್ಮ ಅಭಿಮಾನಿಗಳ ಸುರಕ್ಷತೆಯ ನಿಟ್ಟಿನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ''ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ನಿಮ್ಮ ಅಭಿಮಾನದ ಅಪ್ಪುಗೆ ಮತ್ತೊಂದು ವರ್ಷವನ್ನು ಸಾರ್ಥಕಗೊಳಿಸಿದೆ. ಹೊಸ ವರ್ಷ ಹೊಸ ಭರವಸೆಗಳೊಂದಿಗೆ ನಗುನಗುತ್ತಾ ಬದುಕೋಣ. ಬದುಕನ್ನು ಮೆರಗುಗೊಳಿಸುವಂತಹ ಹೊಸ ಯೋಜನೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ. ಸಿನಿಮಾ ಕೆಲಸದ ನಿಮಿತ್ತ ನಾನು ಹುಟ್ಟುಹಬ್ಬದಂದು ಊರಿನಲ್ಲಿ ಇರುವುದಿಲ್ಲ. ಬಬ್ಬರ ಹುಟ್ಟುಹಬ್ಬಕ್ಕೆ ನೀವು ತೋರುವ ಅಭಿಮಾನ ಜವಾಬ್ದಾರಿಯುತವಾಗಿರಲಿ ಎಂಬುದು ನನ್ನ ಪ್ರೀತಿಯ ಮನವಿ. ಹಾಗಾಗಿ ಫ್ಲೆಕ್ಸ್, ಬ್ಯಾನರ್ಗಳ ಯಾವುದೇ ಆಡಂಬರ ಮಾಡದೇ ನನ್ನ ಮನಸ್ಸಿಗೆ ನೋವಾಗುವ ನಡವಳಿಕೆ ತೋರದೇ ನೀವು ಇದ್ದಲ್ಲಿಂದಲೇ ನಿಮ್ಮ ಕುಟುಂಬದವರು ಹೆಮ್ಮೆ ಪಡುವ ಕೆಲಸ ನಿಮ್ಮಿಂದ ಆದರೆ ಅದಕ್ಕಿಂತ ದೊಡ್ಡ ಜನ್ಮದಿನದ ಉಡುಗೊರೆ ನನಗೆ ಮತ್ತೊಂದಿಲ್ಲ. ಆದಷ್ಟು ಬೇಗ ನಿಮ್ಮನ್ನೆಲ್ಲಾ ಬೇಟಿ ಆಗುತ್ತೇನೆ. ಎಲ್ಲರಿಗೂ ಹೊಸ ವರ್ಷ ಒಳಿತನ್ನು ತರಲಿ. ನಿಮ್ಮ ಪ್ರೀತಿಯ ಯಶ್'' ಎಂದು ತಿಳಿಸಿದ್ದರು.
ಇದನ್ನೂ ಓದಿ:ಬಾಕ್ಸ್ ಆಫೀಸ್ನಲ್ಲಿ ಮುಗ್ಗರಿಸಿದ್ರೂ ಆಸ್ಕರ್ಗೆ ಎಂಟ್ರಿ; ಇದು ಸೂರ್ಯ ನಟನೆಯ 'ಕಂಗುವ' ಸಾಧನೆ