ನಿರ್ದೇಶಕ ಸಿಂಪಲ್ ಸುನಿ ಹಾಗೂ ವಿನಯ್ ರಾಜ್ಕುಮಾರ್ ಜೋಡಿಯ 'ಒಂದು ಸರಳ ಪ್ರೇಮಕಥೆ' ಸಿನಿಮಾ ಫೆ.8ರಂದು ತೆರೆಕಂಡು ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಇತ್ತೀಚೆಗೆ ಖುಷಿ ಹಂಚಿಕೊಂಡು ಸಂಭ್ರಮಿಸಿದೆ.
ಈ ವೇಳೆ ಮಾತನಾಡಿದ ನಿರ್ದೇಶಕ ಸಿಂಪಲ್ ಸುನಿ, ''ಸಕ್ಸಸ್ ಒಂದೊಂದು ಟೈಮ್ನಲ್ಲಿ ಒಂದೊಂದು ಥರ ಡಿಫೈನ್ ಆಗುತ್ತದೆ. 'ಸಿಂಪಲ್ ಆಗಿ ಒಂದು ಲವ್ ಸ್ಟೋರಿ' ಯಶಸ್ವಿಯಾದಾಗ 75 ದಿನಕ್ಕೆ ಸಂಭ್ರಮಾಚರಣೆ ಮಾಡಿದ್ದೆವು. ಟಿವಿ ರೈಟ್ಸ್ ಜೊತೆಗೆ ಒಂದು ಕಾರ್ಯಕ್ರಮ ಕೊಡುವುದೆಂದು ನಿರ್ಧರಿಸಿದ್ದೆವು. ಇವತ್ತು ಯಾವುದಾದರೂ ಟಿವಿ ಚಾನೆಲ್ನವರು ಕರೆದು ಮಾತನಾಡಿಸಿದರೆ ಅದು ಸಕ್ಸಸ್ ಅಂತ. ಜನ ನೋಡಲಿಕ್ಕೆ ಇಷ್ಟೊಂದು ಸಂಖ್ಯೆಯಲ್ಲಿ ಬಂದಿದ್ದಾರೆ ಎಂಬುದೇ ಯಶಸ್ಸು. ರಿರ್ಟನ್ಸ್ ಆಗಿದೆ, ಹಾಗೆಯೇ ಖುಷಿ ಇದೆ. ಕನ್ನಡದ ಜೊತೆ ಉಳಿದ ನಾಲ್ಕು ಭಾಷೆಗೆ ಒಂದು ಸರಳ ಪ್ರೇಮ ಕಥೆ ಸಿನಿಮಾ ಕ್ಲಿಯರ್ ಕಟ್ ಆಗಿ ಡಬ್ ಆಗಿದೆ. ಆಯಾ ಭಾಷೆಯಲ್ಲಿ ಆಯಾ ಟೈಟಲ್ನಲ್ಲೇ ಒಟಿಟಿಯಲ್ಲಿ ರಿಲೀಸ್ ಆಗಲಿದೆ'' ಎಂದರು.
ಬಳಿಕ ನಟ ವಿನಯ್ ರಾಜ್ಕುಮಾರ್ ಮಾತನಾಡಿ, ''ತುಂಬಾ ಖುಷಿಯಾಗುತ್ತಿದೆ. ಫ್ಯಾಮಿಲಿ ಎಂಟರ್ ಟೈನರ್. ಸ್ವಚ್ಛ ಕಾಮಿಡಿಯೊಂದಿಗೆ ಇಡೀ ಫ್ಯಾಮಿಲಿ ಕುಳಿತು ನೋಡುವ ಚಿತ್ರ. ಜನರಿಂದ ತುಂಬಾ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ಜನರು ನನ್ನನ್ನು, ಸಿನಿಮಾ, ನಿರ್ದೇಶಕ, ಮ್ಯೂಸಿಕ್ ಹಾಗೂ ಟೆಕ್ನಿಷಿಯನ್ಸ್ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಕುಟುಂಬಸ್ಥರೆಲ್ಲ ಎಂಜಾಯ್ ಮಾಡಿರುವುದು ದೊಡ್ಡ ಸಕ್ಸಸ್'' ಎಂದು ಹೇಳಿದರು.