ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ತಾರೆಯರಲ್ಲೋರ್ವರಾಗಿ ಗುರುತಿಸಿಕೊಂಡಿರುವ ಶ್ರೀಮುರಳಿ ಅವರಿಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. 43ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸ್ಯಾಂಡಲ್ವುಡ್ ರೋರಿಂಗ್ ಸ್ಟಾರ್ಗೆ ಕುಟುಂಬ ಸದಸ್ಯರು, ಆಪ್ತರು, ಸಿನಿ ಸ್ನೇಹಿತರು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಫ್ಯಾನ್ಸ್ಗಾಗಿ ನಟನ ಕಡೆಯಿಂದ ಸ್ಪೆಷಲ್ ಟ್ರೀಟ್ ಕೂಡಾ ಸಿಕ್ಕಿದೆ.
ಆ ಟ್ರೀಟ್ ಏನು ಅಂತೀರಾ..? ಶ್ರೀಮುರಳಿ ಜನ್ಮದಿನಕ್ಕೆ ಅವರ ಹೊಸ ಸಿನಿಮಾ ಅನೌನ್ಸ್ ಆಗಿದೆ. ತೆಲುಗಿನ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆಯೊಂದಿಗೆ ಕೈಜೋಡಿಸಿದ್ದು, ಇಂದು ನಟನ ಜನ್ಮದಿನ ಹಿನ್ನೆಲೆ, ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದೆ. ಈ ಬಗ್ಗೆ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ.
'ಬಘೀರ' ಸಿನಿಮಾ ಮೂಲಕ ಸೂಪರ್ ಹಿಟ್ ಪಡೆದ ರೋರಿಂಗ್ ಸ್ಟಾರ್ ಅವರ ಮುಂದಿನ ಸಿನಿಮಾ ಯಾವುದು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಇಂದು ಶ್ರೀಮುರಳಿ ಬರ್ತಡೇ ಪ್ರಯುಕ್ತ ಮುಂಬರುವ ಪ್ರಾಜೆಕ್ಟ್ನ ಅಪ್ಡೇಟ್ ಹೊರಬಿದ್ದಿದೆ. ಟಾಲಿವುಡ್ನ ಫೇಮಸ್ ಪ್ರೊಡಕ್ಷನ್ ಹೌಸ್ ಪೀಪಲ್ ಮೀಡಿಯಾ ಫ್ಯಾಕ್ಟರಿ ಜತೆ ಕೈ ಜೋಡಿಸಿದ್ದಾರೆ. ಅಂದರೆ ಈ ಸಂಸ್ಥೆ ನಿರ್ಮಾಣ ಮಾಡಲಿರುವ ಸಿನಿಮಾದಲ್ಲಿ ನಾಯಕನಾಗಿ ಶ್ರೀಮುರಳಿ ಬಣ್ಣ ಹಚ್ಚಲಿದ್ದಾರೆ.
ಪೀಪಲ್ ಮೀಡಿಯಾ ಫ್ಯಾಕ್ಟರಿ ಈ ಸಿನಿಮಾ ನಿರ್ಮಾಣದ ಮೂಲಕ ಕನ್ನಡ ಚಿತ್ರೋದ್ಯಮ ಪ್ರವೇಶಿಸುತ್ತಿದೆ. ಈಗಾಗಲೇ ಕನ್ನಡದ ನಿರ್ಮಾಣ ಸಂಸ್ಥೆಗಳು ಬಹುಭಾಷೆ ಸಿನಿಮಾ ನಿರ್ಮಾಣದಲ್ಲಿ ತೊಡಗಿವೆ. ಇದೀಗ ಟಾಲಿವುಡ್ನ ಜನಪ್ರಿಯ ಸಂಸ್ಥೆ ಕನ್ನಡದ ಸಿನಿಮಾವೊಂದನ್ನು ನಿರ್ಮಾಣ ಮಾಡಲು ಮುಂದಾಗಿದೆ.