ಕನ್ನಡದ ಸ್ಟಾರ್ ಸಿಂಗರ್ ಸಂಜಿತ್ ಹೆಗ್ಡೆ ಕೇವಲ ಸ್ಯಾಂಡಲ್ವುಡ್ಗೆ ಸೀಮಿತವಾಗದೇ ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿಯೂ ತಮ್ಮ ಗಾಯನದ ಮೂಲಕ ಸಂಗೀತ ಪ್ರಿಯರನ್ನು ರಂಜಿಸುತ್ತಿದ್ದಾರೆ. ರಿಯಾಲಿಟಿ ಶೋ ಮೂಲಕ ಪರಿಚಿತರಾದ ಸಂಜಿತ್ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡರು. ಕೇವಲ ಗಾಯನಕ್ಕೆ ಸೀಮಿತವಾಗದೇ ನಟನೆಯಲ್ಲಿಯೂ ತೊಡಗಿಸಿಕೊಂಡಿರುವ ಸಂಜಿತ್ ಅವರೀಗ ಮತ್ತೊಂದು ಹೊಸ ಹಾಡಿನ ಮೂಲಕ ಪ್ರೇಕ್ಷಕರೆದುರು ಪ್ರತ್ಯಕ್ಷರಾಗಿದ್ದಾರೆ.
'ನಂಗೆ ಅಲ್ಲವಾ' ಹಾಡಿನಲ್ಲಿ ಸಂಜಿತ್ ಹೆಗ್ಡೆ, ಯುವ ನಟಿ ಸಂಜನಾ ದಾಸ್ ಜೊತೆಗೂಡಿ ಹಾಡಿ ಕುಣಿದಿದ್ದಾರೆ. ಹಾಗಂತ ಇದು ಸಿನಿಮಾ ಗೀತೆಯಲ್ಲ. ಬದಲಾಗಿ ಸಂಜಿತ್, ತಮ್ಮ ತಂಡದೊಂದಿಗೆ ಸೇರಿ ಸ್ವತಂತ್ರವಾಗಿ ರಚಿಸಿರುವ ಗಾನಬಜಾನ. ನಾಗಾರ್ಜುನ್ ಶರ್ಮಾ ಪದಪೊಣಿಸಿರುವ ಹಾಡಿಗೆ ಸಂಜಿತ್ ಕಂಠದಾನ ಮಾಡಿದ್ದಾರೆ. ಜೊತೆಗೆ, ಸಂಗೀತ ಸಂಯೋಜಿಸಿದ್ದು, ಬಿಜೋಯ್ ಶೆಟ್ಟಿ ನಿರ್ದೇಶನದಲ್ಲಿ ಈ ಹಾಡು ಮೂಡಿಬಂದಿದೆ.
ಯುವ ಪ್ರೇಮಿಗಳ ಆಂಥಮ್ನಂತಿರುವ ನಂಗೆ ಅಲ್ಲವಾ ಗೀತೆ ಕೇಳುಗರನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತದೆ. ಈ ಹಾಡಿನ ಬಗ್ಗೆ ಮಾತನಾಡಿರುವ ಸಂಜಿತ್, ''ಈ ಹಾಡು ನನ್ನ ಜೀವನವನ್ನು ಬದಲಾಯಿಸಿತು. ಇದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ. ನಂಗೆ ಅಲ್ಲವಾ ನನ್ನ ಪ್ರೀತಿಯ ಜೀವನದ ಪ್ರಯಾಣವನ್ನು ವ್ಯಕ್ತಪಡಿಸಲು ನನಗೆ ಸಹಾಯ ಮಾಡಿತು. ಈ ಪ್ರಯಾಣದಲ್ಲಿ ಭಾಗವಾಗಿರುವ ಪ್ರತಿಯೊಬ್ಬರಿಗೂ ನಾನು ಕೃತಜ್ಞನಾಗಿದ್ದೇನೆ. ಈ ಹಾಡು ಬಿಡುಗಡೆಯೊಂದಿಗೆ ಹೃದಯ ಹಗುರವೆನಿಸುತ್ತಿದೆ" ಎಂದಿದ್ದಾರೆ.