ಮಂಗಳೂರು (ದಕ್ಷಿಣ ಕನ್ನಡ):ಫ್ಯಾಷನ್ ಲೋಕದ ಆಕರ್ಷಣೆ ಹೆಚ್ಚುತ್ತಿದೆ. ಆದ್ರೆ ಅದೆಷ್ಟೋ ಯುವತಿಯರಿಗೆ ಮನೆಯಲ್ಲಿಯೇ ಸೂಕ್ತ ಬೆಂಬಲ ಇರುವುದಿಲ್ಲ. ಆದರೆ ಮೂಲತಃ ಮಂಗಳೂರಿನ ಅಮ್ಮ- ಮಗಳು ಫ್ಯಾಷನ್ ಲೋಕದಲ್ಲಿ ಆಸಕ್ತಿ ಹೊಂದಿ, ಇದರಲ್ಲಿ ಸಾಧನೆ ಮಾಡಿದ್ದಾರೆ.
ಡಿಶಲ್ ತೌರೋ ಚಿಕ್ಕಮಗಳೂರಿನ ಎಐಟಿಯಲ್ಲಿ ಪ್ರಥಮ ಬಿಬಿಎ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಚಿಕ್ಕಮಗಳೂರಿನ ಶಿವಂ ಸ್ಕೂಲ್ ಅಫ್ ಡ್ಯಾನ್ಸ್ನ ಶರತ್ ಅವರಿಂದ ತರಬೇತಿ ಪಡೆದಿದ್ದಾರೆ. 'ದಿ ಸ್ಕಲ್ಟ್ ಫಿಟ್ನೆಸ್'ನ ಅಲಿ ಹಸೀಬ್ ಅವರಿಂದಲೂ ಫಿಟ್ನೆಸ್ ತರಬೇತಿ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಕಿಂಗ್ಸ್ ಮೆಡೋಸ್‌ನಲ್ಲಿ ಆಗಸ್ಟ್ 29ರಿಂದ 3 ದಿನಗಳ ಕಾಲ ನಡೆದಿದ್ದ 'ಮಿಸ್ ಆ್ಯಂಡ್ ಮಿಸೆಸ್ ಇಂಡಿಯಾ ಕರ್ನಾಟಕ 2024'ರ 8ನೇ ಆವೃತ್ತಿಯ ಫ್ಯಾಷನ್ ಶೋನಲ್ಲಿ ಅವರು ಭಾಗಿಯಾಗಿದ್ದರು. ಮಿಸ್ ಇಂಡಿಯಾ ಕರ್ನಾಟಕ ವಿಭಾಗದಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.
ಡಿಶಲ್ ತೌರೋ ಅವರಿಗಿದು ಮೊದಲ ಹೆಜ್ಜೆ. ಪ್ರಥಮ ಬಾರಿಗೆ ಫ್ಯಾಷನ್ ಲೋಕಕ್ಕೆ ಕಾಲಿಟ್ಟಿದ್ದಾರೆ. ಈವರೆಗೆ ಯಾವುದೇ ಫ್ಯಾಷನ್ ಈವೆಂಟ್ನಲ್ಲಿ ಕಾಣಿಸಿಕೊಳ್ಳದ ಅವರು ನೇರವಾಗಿ ಬೆಂಗಳೂರಿನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ಮೊದಲ ಸ್ಪರ್ಧೆಯಲ್ಲೇ ರನ್ನರ್ ಅಪ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಅಷ್ಟು ಮಾತ್ರವಲ್ಲದೇ ಬೆಸ್ಟ್ ವಾಕ್ ಅವಾರ್ಡ್, ಬೆಸ್ಟ್ ಟ್ಯಾಲೆಂಟ್ ಅವಾರ್ಡ್ ಅನ್ನು ಸಹ ಮುಡಿಗೇರಿಸಿಕೊಂಡಿದ್ದಾರೆ.
ಡಿಶಲ್ ತೌರೋ ಫ್ಯಾಷನ್ ಪ್ರಪಂಚಕ್ಕೆ ಬರಲು ಪ್ರಮುಖ ಕಾರಣ ಅವರ ಅಮ್ಮ. ಮೂಲತಃ ಮಂಗಳೂರಿನ ಶಾಲೆಟ್ ತೌರೋ (ತಾಯಿ) ವಿವಾಹವಾದ ಬಳಿಕ ಚಿಕ್ಕಮಗಳೂರಿನಲ್ಲಿ ನೆಲೆಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಮಿಸೆಸ್ ಇಂಡಿಯಾ ಕರ್ನಾಟಕ 2023ರ ಕ್ಲಾಸಿಕ್ ವಿಭಾಗದಲ್ಲಿ ಸೆಕೆಂಡ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಅಷ್ಟು ಮಾತ್ರವಲ್ಲದೇ ಫಿಟ್ನೆಸ್ ಅವಾರ್ಡ್ ಕೂಡ ಪಡೆದುಕೊಂಡಿದ್ದರು.
ಮಗಳು ತನ್ನಂತೆ ಫ್ಯಾಷನ್ ಲೋಕಕ್ಕೆ ಬರಬೇಕೆಂಬುದು ಅವರ ಮಹದಾಸೆಯಾಗಿತ್ತು. ಅದರಂತೆ ಮಂಗಳೂರಿನ ಪಾಥ್ ವೇ ಎಂಟರ್ ಪ್ರೈಸಸ್ನ ದೀಪಕ್ ಗಂಗೂಲಿ ಅವರನ್ನು ಸಂಪರ್ಕಿಸಿ ಮಗಳಿಗೆ ಟ್ರೈನಿಂಗ್ ನೀಡಲು ತಿಳಿಸಿದ್ದಾರೆ. ದೀಪಕ್ ಗಂಗೂಲಿ ಟ್ರೈನಿಂಗ್ ನೀಡುವ ಜೊತೆಗೆ ಮಿಸ್ ಇಂಡಿಯಾ ಕರ್ನಾಟಕ ಸ್ಪರ್ಧೆಯಲ್ಲಿ ಡಿಶಲ್ ಭಾಗಿಯಾಗಲು ಎಲ್ಲಾ ತಯಾರಿ ಮಾಡಿಸಿದ್ದರು. ಅದರಂತೆ, ಡಿಶಲ್ ತಮ್ಮ ಮೊದಲ ಸ್ಪರ್ಧೆಯಲ್ಲೇ ರನ್ನರ್ ಅಪ್ ಆಗಿ ಭರವಸೆ ಮೂಡಿಸಿದ್ದಾರೆ.