ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್ ಸೀಸನ್ 11' ಫಿನಾಲೆಗೆ ಇನ್ನು 10 ದಿನಗಳಷ್ಟೇ ಬಾಕಿ. ಗ್ರ್ಯಾಂಡ್ ಫಿನಾಲೆಗೆ ದಿನಗಣನೆ ಆರಂಭ ಆಗಿದ್ದು, ವಿಜೇತರು ಯಾರಾಗಬಹುದು ಎನ್ನುವ ಕುತೂಹಲ ಇಡೀ ಕನ್ನಡಿಗರಲ್ಲಿ ಮನೆ ಮಾಡಿದೆ. ಕಳೆದ ದಿನ ಇಡೀ ಭಾರತದಾದ್ಯಂತ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಬಿಗ್ ಬಾಸ್ನ ಇಂದಿನ ಸಂಚಿಕೆಯಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ.
ಹೌದು, ದೊಡ್ಮನೆಯಲ್ಲಿ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಬಲು ಜೋರಾಗಿದೆ. ಬಿಗ್ ಬಾಸ್ಗೆ ಕನ್ನಡ ಚಿತ್ರರಂಗದ ಹಿರಿಯ ನಟಿ ತಾರಾ ಅನುರಾಧ ಪ್ರವೇಶಿಸಿ ಸ್ಪರ್ಧಿಗಳ ಮನಸ್ಸನ್ನು ಹಗುರಗೊಳಿಸಿದ್ದಾರೆ. ಕಹಿ ಮರೆತು ಸಿಹಿಯೊಂದಿಗೆ ಮುಂದುವರೆಯೋಣ ಎಂದು ಸ್ಪರ್ಧಿಗಳು ಮನಬಿಚ್ಚಿ ಮಾತನಾಡಿದ್ದಾರೆ. ಇದರ ಒಂದು ಸುಳಿವನ್ನು ''ಹೊಸ ಬಂಧಗಳ ಬೆಸೆಯುತ್ತಿದೆ ದೊಡ್ಮನೆ ಸಂಕ್ರಾಂತಿ, ಎಳ್ಳು ಬೆಲ್ಲ ನಾಲಿಗೆಗೆ ಸೋಕಿದ ಕೂಡಲೇ ಹೊರಬಂದವಾ ಒಳ್ಳೇ ಮಾತುಗಳು?, ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ - ಶುಕ್ರ ರಾತ್ರಿ 9:30ಕ್ಕೆ ಪ್ರಸಾರ'' ಎಂಬ ಕ್ಯಾಪ್ಷನ್ನಡಿ ಅನಾವರಣಗೊಂಡಿರೋ ಪ್ರೋಮೋದಲ್ಲಿ ಕಾಣಬಹುದು. ಇಲ್ಲಿ ಪ್ರತಿ ಸ್ಪರ್ಧಿಗಳ ಮಾತು ಅವರ ಮನದಾಳವೇ ಅಥವಾ ಪ್ರೇಕ್ಷಕರನ್ನು ಸೆಳೆಯುವ ತಂತ್ರವೇ? ಎನ್ನುವ ಪ್ರಶ್ನೆಯೂ ಸೋಷಿಯಲ್ ಮೀಡಿಯಾಗಳಲ್ಲಿ ಎದ್ದಿದೆ.
ಸ್ಪರ್ಧಿಗಳೆಲ್ಲ ಸೇರಿ ದೇವರಿಗೆ ವಿಶೇಷ ಪೂಜೆ ಸಲ್ಲಿಸೋ ದೃಶ್ಯದ ಮೂಲಕ ಪ್ರೋಮೋ ಆರಂಭಗೊಂಡಿದೆ. ಹಿರಿಯ ನಟಿ ತಾರಾ ಅನುರಾಧ ಅವರ ಎಂಟ್ರಿಯಾಗಿದ್ದು, ಸಂಕ್ರಾಂತಿ ಸಂಭ್ರಮದಲ್ಲಿ ತಾರಾ ಮೆರುಗು ಎಂಬ ಬಿಗ್ ಬಾಸ್ನ ಹಿನ್ನೆಲೆ ದನಿ ಕೇಳಿಬಂದಿದೆ. ನಂತರ ಸ್ಪರ್ಧಿಗಳ ನಡುವೆ ಕುಳಿತು ಸಂಕ್ರಾತಿ ಹಬ್ಬದಂದು ಎಳ್ಳು ಬೆಲ್ಲ ತಿಂದು ಒಳ್ಳೇದ್ ಮಾತಾಡೋಣ ಎಂದು ತಿಳಿಸಿದ್ದಾರೆ. ಸ್ಪರ್ಧಿಗಳೆಲ್ಲರೂ ಪರಸ್ಪರ ಎಳ್ಳು ಬೆಲ್ಲ ತಿನ್ನಿಸಿದ್ದಾರೆ.