ಹೈದರಾಬಾದ್:ತಮಿಳು ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ನಿರ್ದೇಶಕ ಮಣಿರತ್ನಂ ಹಾಗೂ ನಟ ಉಳಗನಾಯಗನ್ ಕಮಲ್ ಹಾಸನ್ ಅವರ ಕಾಂಬಿನೇಷನ್ನಲ್ಲಿ ಬರುತ್ತಿರುವ 'ಥಗ್ ಲೈಫ್' ಸಿನಿಮಾದ ಚಿತ್ರೀಕರಣ ಇಂದು ಚೆನ್ನೈನಲ್ಲಿ ಆರಂಭವಾಗಿದೆ. ಸಿನಿಮಾದ ಪಾತ್ರವರ್ಗದ ಕುರಿತು ವಿಶೇಷ ಪ್ರೋಮೋ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಂಚಿಕೊಂಡಿರುವ ಚಿತ್ರ ನಿರ್ಮಾಣ ಸಂಸ್ಥೆಗಳು ಇಂದು ಚಿತ್ರೀಕರಣ ಪ್ರಾರಂಭಿಸಿರುವುದಾಗಿ ಘೋಷಿಸಿವೆ.
ಪ್ಯಾನ್ ಇಂಡಿಯಾ ಸಿನಿಮಾಗಳಾದ ಕಲ್ಕಿ 2989AD ಹಾಗೂ ಇಂಡಿಯನ್ 2 ಚಿತ್ರೀಕರಣ ಪೂರ್ಣಗೊಳಿಸಿರುವ ಕಮಲ್ ಹಾಸನ್ ಇಂದು ಥಗ್ ಲೈಪ್ ಸೆಟ್ಗೆ ಎಂಟ್ರಿಯಾಗಿದ್ದಾರೆ. ಪಿರಿಯಾಡಿಕಲ್ ಆ್ಯಕ್ಷನ್ ಎಂಟರ್ಟೈನರ್ ಆಗಿ ಸಿನಿಮಾ ತಯಾರಾಗುತ್ತಿದೆ. 'ನಾಯಗನ್' ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದ ಈ ಜೋಡಿ 35 ವರ್ಷಗಳ ನಂತರ 'ಥಗ್ ಲೈಫ್' ಸಿನಿಮಾದಲ್ಲಿ ಮತ್ತೆ ಒಂದಾಗಿದೆ. ಅಂದು ನಾಯಗನ್ ಮೂಲಕ ಸಿನಿರಂಗದಲ್ಲಿ ಸಂಚಲನ ಮೂಡಿಸಿದ್ದ ಕಮಲ್ ಹಾಸನ್ ಹಾಗೂ ಮಣಿರತ್ನಂ ಕಾಂಬಿನೇಷನ್ನ ಈ ಸಿನಿಮಾದ ಮೇಲೆ ಇದೀಗ ಸಿನಿಪ್ರಿಯರ ನಿರೀಕ್ಷೆ ಹೆಚ್ಚಾಗಿದೆ. ಇದು ಕಮಲ್ ಹಾಸನ್ ಅವರು 234ನೇ ಸಿನಿಮಾವಾಗಿದ್ದು, ಎರಡು ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಚಿತ್ರದ ಪ್ರೋಮೋ ವಿಡಿಯೋಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು.
ಇದೀಗ ಚಿತ್ರದ ಪಾತ್ರವರ್ಗದ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದ್ದು, ಈ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಸೌತ್ ಸಿನಿಮಾರಂಗದ ಹಲವು ತಾರೆಯರು ಉಳಗನಾಯಗನ್ ಜೊತೆಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ತಮಿಳು ಚಿತ್ರರಂಗದ ಜಯಂ ರವಿ, ತ್ರಿಶಾ, ಐಶ್ವರ್ಯ ಲಕ್ಷ್ಮೀ, ಗೌತಮ್ ಕಾರ್ತಿಕ್, ಮಲಯಾಳಂ ಚಿತ್ರರಂಗದ ದುಲ್ಕರ್ ಸಲ್ಮಾನ್, ಜೋಜು ಜಾರ್ಜ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ದೊಡ್ಡ ಬಜೆಟ್ನಲ್ಲಿ ಅದ್ಧೂರಿ ಸಿನಿಮಾ: ತಮಿಳು ಚಿತ್ರರಂಗದ ಸ್ಟಾರ್ ನಿರ್ದೇಶಕ ಹಾಗೂ ಸ್ಟಾರ್ ನಟರೊಬ್ಬರ ಪ್ಯಾನ್ ಇಂಡಿಯಾ ಸಿನಿಮಾಗೆ ಮೂರು ನಿರ್ಮಾಣ ಸಂಸ್ಥೆಗಳು ಜಂಟಿಯಾಗಿ ಬಂಡವಾಳ ಹೂಡುತ್ತಿವೆ. ನಟ ಕಮಲ್ ಹಾಸನ್ ಒಡೆತನದ ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್, ನಟ, ರಾಜಕಾರಣಿ ಉದಯನಿಧಿ ಸ್ಟ್ಯಾಲಿನ್ ಒಡೆತನದ ರೆಡ್ ಜೈಂಟ್ ಪಿಕ್ಚರ್ಸ್ ಹಾಗೂ ಮಣಿರತ್ನಂ ಅವರ ಮದ್ರಾಸ್ ಟಾಕೀಸ್ ದೊಡ್ಡ ಬಜೆಟ್ನಲ್ಲಿ ಅದ್ಧೂರಿಯಾಗಿ ಸಿನಿಮಾ ನಿರ್ಮಾಣದ ಜವಾಬ್ದಾರಿ ಹೊತ್ತಿವೆ. ನಟನೆ ಹಾಗೂ ನಿರ್ದೇಶನದ ಜೊತೆಗೆ ಕಮಲ್ ಹಾಸನ್ ಹಾಗೂ ಮಣಿರತ್ನಂ ಅವರು 'ಥಗ್ ಲೈಫ್' ಸಿನಿಮಾ ನಿರ್ಮಾಣದ ಹೊಣೆಯನ್ನೂ ಹೊತ್ತಿರುವ ಕಾರಣ, ಫ್ಯಾನ್ಸ್ ನಿರೀಕ್ಷೆ ದುಪ್ಪಟ್ಟಾಗಿದೆ.