ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಮೋಹನ್ ಲಾಲ್ ಇತ್ತೀಚೆಗೆ ಪ್ರಶಸ್ತಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಅದ್ಭುತ ನೃತ್ಯ ಪ್ರದರ್ಶನ ನೀಡಿದ್ದಾರೆ. ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ನಟನ ವಿಡಿಯೋ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ವರ್ಷ ತೆರೆಕಂಡು ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿರುವ 'ಜವಾನ್' ಚಿತ್ರದ ಅನಿರುದ್ಧ್ ರವಿಚಂದರ್ ಅವರ ಹಿಟ್ ಸಾಂಗ್ 'ಜಿಂದಾ ಬಂದಾ'ಗೆ ಮೋಹನ್ ಲಾಲ್ ಮೈ ಕುಣಿಸಿದ್ದಾರೆ. ತಮ್ಮ ಸಖತ್ ಸ್ಟೆಪ್ಗಳಿಂದ ಪ್ರೇಕ್ಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಸಮಾರಂಭದಿಂದ ಮೋಹನ್ ಲಾಲ್ ಮತ್ತು ಮಮ್ಮುಟ್ಟಿ ನಡುವಿನ ಹೃದಯಸ್ಪರ್ಶಿ ಕ್ಷಣ ಕೂಡ ಆನ್ಲೈನ್ನಲ್ಲಿ ಕಾಣಿಸಿಕೊಂಡಿದೆ. ಮೋಹನ್‌ಲಾಲ್, ಮಮ್ಮುಟ್ಟಿ ಕೆನ್ನೆಗೆ ಮುತ್ತಿಕ್ಕಿರುವ ಫೋಟೋ ಶರವೇಗದಲ್ಲಿ ವೈರಲ್ ಆಗಿ ನೆಟ್ಟಿಗರಿಂದ ಪ್ರತಿಕ್ರಿಯೆ ಸ್ವೀಕರಿಸಿದೆ. ಇಬ್ಬರು ಸೂಪರ್ಸ್ಟಾರ್ಗಳ ಪ್ರೀತಿಯ ಕ್ಷಣ ಅಭಿಮಾನಿಗಳ ಮನಸೂರೆಗೊಂಡಿದೆ.
ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಫ್ಯಾನ್ಸ್ ಪೇಜ್ಗಳು ಹಂಚಿಕೊಂಡಿರುವ ವಿಡಿಯೋಗಳಲ್ಲಿ, ಮೋಹನ್‌ಲಾಲ್ ಅನಿಮಲ್ ಪ್ರಿಂಟ್ ಶರ್ಟ್, ಬ್ರೌನ್ ಲೆದರ್ ಜಾಕೆಟ್, ಪ್ಯಾಂಟ್ ಧರಿಸಿ ಸಖತ್ ಹ್ಯಾಂಡ್ಸಂ ಆಗಿ ಕಾಣಿಸಿಕೊಂಡಿದ್ದಾರೆ. 63ರ ಹರೆಯದ ನಟನ ಉತ್ಸಾಹಭರಿತ ನೃತ್ಯ ಪ್ರೇಕ್ಷಕರನ್ನು ಆಕರ್ಷಿಸಿದೆ.
ಶಾರುಖ್ ಖಾನ್ ಅವರ ಜಿಂದಾ ಬಂದಾಗೆ ಭರ್ಜರಿ ಸ್ಟೆಪ್ ಹಾಕಿದ ಹಿನ್ನೆಲೆಯಲ್ಲಿ ಶಾರುಖ್ ತಮ್ಮ ಅಭಿಮಾನಿಗಳ ಪ್ರಶಂಸೆಗೂ ಪಾತ್ರರಾದರು. 63ರ ಹರೆಯದಲ್ಲೂ ಇಷ್ಟು ಸಕ್ರಿಯರಾಗಿರುವುದನ್ನು ಕಂಡ ನೆಟ್ಟಿಗರು ನಟನನ್ನು ಗುಣಗಾನ ಮಾಡುತ್ತಿದ್ದಾರೆ. ಸೋಷಿಯಲ್ ಮಿಡಿಯಾ ಮಲಯಾಳಂ ಸೂಪರ್ ಸ್ಟಾರ್ ಅನ್ನು ಶ್ಲಾಘಿಸುವಂತಹ ಪೋಸ್ಟ್ಗಳಿಂದ ತುಂಬಿ ತುಳುಕಿದೆ. "ಕಂಪ್ಲೀಟ್ ಆ್ಯಕ್ಷರ್" ಎಂದು ಉಲ್ಲೇಖಿಸಿ ಅಭಿಮಾನಿಗಳು ಶ್ಲಾಘಿಸಿಸಿದ್ದಾರೆ. ಎಸ್‌ಆರ್‌ಕೆ ಮೇಲಿನ ಮೋಹನ್‌ಲಾಲ್ ಅವರ ಒಲವು ಹೊಸದಾಗಿ ಬಹಿರಂಗಗೊಂಡ ವಿಚಾರವೇನಲ್ಲ. ಕಳೆದ ವರ್ಷ ಶಾರುಖ್ ಜನ್ಮದಿನಕ್ಕೆ ಶುಭ ಹಾರೈಸಿದ್ದು, ಅಭಿಮಾನಿಗಳ ಗಮನ ಸೆಳೆದಿತ್ತು.