ಕನ್ನಡ ಚಿತ್ರರಂಗದಲ್ಲಿ ನಟ ದರ್ಶನ್ ಅವರಿಗೆ ದಾಸ ಎಂಬ ಹೆಸರು ತಂದುಕೊಟ್ಟಿದ್ದೇ ''ಮೆಜೆಸ್ಟಿಕ್'' ಚಿತ್ರ. 22 ವರ್ಷಗಳ ಹಿಂದೆ ತೆರೆಕಂಡು ದೊಡ್ಡ ದಾಖಲೆ ಬರೆದಿದ್ದ ಮೆಜೆಸ್ಟಿಕ್ ಸಿನಿಮಾ ನಟ ದರ್ಶನ್ ಅವರಿಗೆ ಒಳ್ಳೆ ಹೆಸರನ್ನು ತಂದುಕೊಟ್ಟಿತ್ತು. ಆ ಚಿತ್ರಕ್ಕೆ ಆರಂಭದಲ್ಲಿ ಕಾನ್ಸೆಪ್ಟ್ ಹೆಣೆದಿದ್ದ ರಾಮು ಅವರೇ ಈಗ 'ಮೆಜೆಸ್ಟಿಕ್ 2' ನಿರ್ದೇಶಿಸಲು ಮುಂದಾಗಿದ್ದಾರೆ. ಮಹಾಶಿವರಾತ್ರಿಯ ಶುಭ ದಿನದಂದು ಈ ಸಿನಿಮಾ ಸೆಟ್ಟೇರಲಿದೆ.
ಈ ಚಿತ್ರದ ಮೂಲಕ ಹಿರಿಯ ನಿರ್ಮಾಪಕ, ವಿತರಕ ಶಿಲ್ಪಾ ಶ್ರೀನಿವಾಸ್ ಅವರ ಪುತ್ರ ಭರತ್ ನಾಯಕ ನಟನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಅಮ್ಮಾ ಎಂಟರ್ಪ್ರೈಸಸ್ ಮೂಲಕ ಚಿತ್ರದುರ್ಗ ಮೂಲದ ಟಿ. ಆನಂದಪ್ಪ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ದಶಕಗಳಿಂದಲೂ ತಂತ್ರಜ್ಞನಾಗಿ ಕೆಲಸ ಮಾಡುತ್ತಿರುವ ರಾಮು ಅವರು ಈ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಇತ್ತೀಚೆಗೆ ಮೆಜೆಸ್ಟಿಕ್ 2 ಚಿತ್ರದ ಟೈಟಲ್ ಅನಾವರಣ ಮಾಡಲಾಯಿತು.
ನಿರ್ದೇಶಕ ರಾಮು ಮಾತನಾಡಿ, ಆರಂಭದಲ್ಲಿ ನಾನು ಪಿ.ಎನ್ ಸತ್ಯ ಪ್ರೇಂ ಜೊತೆ ಕೆಲಸ ಮಾಡಿದ್ದೆ. ಮೆಜೆಸ್ಟಿಕ್ ಸ್ಕ್ರಿಪ್ಟ್ ಬರೆದಿದ್ದು ನಾನೇ. ನಂತರ ಕಾರಣಾಂತರಗಳಿಂದ ನಾನು ಚಿತ್ರತಂಡದಿಂದ ಹೊರಬರಬೇಕಾಯಿತು. ನಾನು ಬೆಂಗಳೂರಿಗೆ ಬಂದಾಗ ಮೆಜೆಸ್ಟಿಕ್‌ನಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದಾಗಲೇ ಈ ಟೈಟಲ್ ಹೊಳೆದಿತ್ತು. ಮೆಜೆಸ್ಟಿಕ್ ಸಿನಿಮಾ ನನ್ನ ಕನಸು, ಅದೀಗ ನನಸಾಗುತ್ತಿದೆ ಎಂದು ತಿಳಿಸಿದರು.
ಬಳಿಕ ಉದಯೋನ್ಮುಖ ನಾಯಕ ನಟ ಭರತ್ ಮಾತನಾಡಿ, ನಿರ್ದೇಶಕರು ಈ ಕಥೆ, ಟೈಟಲ್ ಹೇಳಿದಾಗ ಬಹಳ ಖುಷಿಯಾಯ್ತು. ನಾನು ದರ್ಶನ್ ಅವರ ಅಭಿಮಾನಿ. ಅವರು ಚಿತ್ರರಂಗದಲ್ಲಿ 25 ವರ್ಷ ಪೂರೈಸಿದ ಸಂದರ್ಭದಲ್ಲಿ ನಮ್ಮ ಸಿನಿಮಾ ಲಾಂಚ್ ಆಗ್ತಿದೆ. ಮರಿದಾಸನ ಪಾತ್ರಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ ಎಂದು ತಿಳಿಸಿದರು.