ಕನ್ನಡ ಚಿತ್ರರಂಗಕ್ಕೆ ನವ ಪ್ರತಿಭೆಗಳ ಆಗಮನ ಮುಂದುವರಿದಿದೆ. ಹೊಸಬರ ಸಿನಿಮಾ ಪಟ್ಟಿಯಲ್ಲೀಗ 'ನಿಮ್ದೆ ಕಥೆ' ಎನ್ನುವ ವಿಭಿನ್ನ ಶೀರ್ಷಿಕೆಯ ಸಿನಿಮಾ ಕೆಲ ವಿಚಾರಗಳಿಂದ ಗಮನ ಸೆಳೆಯುತ್ತಿದೆ. ಸ್ಯಾಂಡಲ್ವುಡ್ನ ಸೂಪರ್ ಹಿಟ್ ಲವ್ ಮಾಕ್ಟೇಲ್ ಖ್ಯಾತಿಯ ಅಭಿಲಾಷ ದಳಪತಿ ಮತ್ತು ರಾಷಿಕಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಸಿನಿಮಾವಿದು. ಸದ್ದಿಲ್ಲದೇ ಶುರುವಾದ ಈ ಚಿತ್ರ ಶೂಟಿಂಗ್ ಮುಗಿಸಿ ಬಿಡುಗಡೆಗೆ ರೆಡಿಯಾಗಿದೆ.
ಇದೊಂದು ಹಾಸ್ಯ ತುಂಬಿದ ಸಿನಿಮಾ. ಎಮೋಷನ್ ಜೊತೆಗೆ ಕೊಂಚ ಸಸ್ಪೆನ್ಸ್ ಕೂಡಾ ಇರಲಿದೆ. ಪ್ರೇಕ್ಷಕರಿಗೆ ರಂಜಿಸಲು ಬೇಕಾದ ಬಹಳಷ್ಟು ಅಂಶಗಳು 'ನಿಮ್ದೆ ಕಥೆ' ಚಿತ್ರದಲ್ಲಿ ಸಿಗಲಿದೆ ಎಂದು ನಿರ್ದೇಶಕರು ಹೇಳಿದ್ದಾರೆ. ಚಿತ್ರದಲ್ಲಿ ಅಭಿಲಾಷ ಧಳಪತಿ ಮತ್ತು ರಾಷಿಕಾ ಶೆಟ್ಟಿ ಅಲ್ಲದೇ, ಸಿಹಿ ಕಹಿ ಚಂದ್ರು, ಕಾಮಿಡಿ ಕಿಲಾಡಿಯ ಕೋಳಿ ಕಳ್ಳ ಮನೋಹರ್ ಗೌಡ, ಕೆ ವಿ ಮಂಜಯ್ಯ, ಜ್ಯೋತಿ ಮರೂರ್ ಸೇರಿದಂತೆ ಮುಂತಾದವರು ಬಣ್ಣ ಹಚ್ಚಿದ್ದಾರೆ.
ಸಿ.ಎಸ್ ರಾಘವೇಂದ್ರ 'ನಿಮ್ದೆ ಕಥೆ' ಚಿತ್ರದ ನಿರ್ದೇಶಕರು. ಪ್ರವೀಣ್ ನಿಕೇತನ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ. ಪ್ರಶಾಂತ್ ಸಾಗರ್ ಅವರ ಛಾಯಾಗ್ರಹಣ ಮತ್ತು ಸುನಿಲ್ ಎಸ್ ಅವರ ಸಂಕಲನವಿದ್ದು, ಇನ್ನೂ ಹಲವು ತಂತ್ರಜ್ಞರು ನಿಮ್ದೆ ಕಥೆ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಶ್ರೀನಿವಾಸ ರೆಡ್ಡಿ ಮತ್ತು ಅರವಿಂದ್ ಯು ಎಸ್ ಜಂಟಿಯಾಗಿ ನಿಮ್ದೆ ಕಥೆ ಚಿತ್ರ ನಿರ್ಮಾಣ ಮಾಡಿದ್ದಾರೆ. ಬೆಂಗಳೂರು ಮತ್ತು ಮೈಸೂರು ಸುತ್ತ ಮುತ್ತ 40 ದಿನಗಳ ಕಾಲ ಚಿತ್ರೀಕರಣ ನಡೆದಿದೆ.