ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪ ಹೊತ್ತು ಜೈಲುವಾಸದಲ್ಲಿರುವ ಕನ್ನಡದ ಜನಪ್ರಿಯ ನಟ ದರ್ಶನ್ ಪ್ರಕರಣದ ಬಗ್ಗೆ ಈಗಾಗಲೇ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಸಾಕಷ್ಟು ನಟ - ನಟಿಯರು, ಚಿತ್ರರಂಗದ ಗಣ್ಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದರ್ಶನ್ ಕಳೆದ ಒಂದೂವರೆ ತಿಂಗಳಿನಿಂದ ಜೈಲುವಾಸ ಅನುಭವಿಸುತ್ತಿದ್ದಾರೆ. ಮನೆ ಊಟ, ಹಾಸಿಗೆ, ಪುಸ್ತಕ ಪೂರೈಸಲು ಕೋರಿ ಕೋರ್ಟ್ನಲ್ಲಿ ಹಾಕಿರುವ ಅರ್ಜಿ ವಿಚಾರವಾಗಿ ಸೇರಿದಂತೆ ಒಟ್ಟಾರೆ ದರ್ಶನ್ ಪ್ರಕರಣದ ಕುರಿತು ನಟ ಹಾಗೂ ರಾಜಕಾರಣಿ ಕುಮಾರ್ ಬಂಗಾರಪ್ಪ ಖಾಸಗಿ ಕಾರ್ಯಕ್ರಮವೊಂದರಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕುಮಾರ್ ಬಂಗಾರಪ್ಪ ಹೇಳಿದ್ದೇನು? ''ಮೊದಲಿಗೆ ಈ ಘಟನೆಯೇ ನಡೆಯಬಾರದಿತ್ತು, ಆದರೆ ನಡೆದು ಬಿಟ್ಟಿದೆ. ನಮ್ಮ ಚಿತ್ರರಂಗದಲ್ಲಿ ಅಪ್ಪಾಜಿಯವರು ಅಭಿಮಾನಿಗಳೇ ದೇವರು ಅಂತಾ ಕರೆಯುತ್ತಿದ್ದರು. ಅಭಿಮಾನಿಗಳು ಹಾಗೂ ಚಿತ್ರರಂಗದಲ್ಲಿ ಹೊಗಳುವುದು, ತೆಗಳುವುದು ಇದ್ದೇ ಇರುತ್ತದೆ. ಚಿತ್ರದುರ್ಗದ ರೇಣುಕಾಸ್ವಾಮಿ ಅವರ ಕುಟುಂಬಕ್ಕಿದು ತುಂಬಲಾರದ ನಷ್ಟ. ದರ್ಶನ್ ಈ ಪ್ರಕರಣದಲ್ಲಿ ಬಂಧಿಯಾಗಿದ್ದಾರೆ. ಕೇಸ್ ಸದ್ಯ ನ್ಯಾಯಾಲಯದಲ್ಲಿದೆ. ಹಾಗಾಗಿ ಮಾತನಾಡುವುದು ಅಷ್ಟು ಯೋಗ್ಯವಲ್ಲ. ದರ್ಶನ್ ಅವರಿಂದ ಈ ಪ್ರಕರಣ ಆಗಿದೆ ಅಂದ್ರೆ ಅದಕ್ಕೆ ನ್ಯಾಯಾಲಯ ಇದೆ, ಕಾನೂನು ಇದೆ. ಚಿತ್ರರಂಗದಲ್ಲಿ ಯಾರಿಗೇ ನೋವಾದರೂ ಕುಟುಂಬದ ಎಲ್ಲರಿಗೂ ನೋವಾಗುತ್ತದೆ. ಈ ಘಟನೆ ದರ್ಶನ್ ಅವರಿಂದಾನೇ ಆಗಿದ್ರೆ ಅದನ್ನು ನ್ಯಾಯಾಲಯ ತೀರ್ಮಾನ ಮಾಡುತ್ತದೆ. ದೇವರು ಇದ್ದಾನೆ. ತಪ್ಪು ಮಾಡಿದವರಿಗೆ ಶಿಕ್ಷೆ, ಅನ್ಯಾಯವಾದವರಿಗೆ ನ್ಯಾಯ ಸಿಗಲಿ'' ಎಂದು ತಿಳಿಸಿದರು.