ಕೋವಿಡ್ -19 ಹಾಗೂ ಇತರೆ ಕಾರಣಗಳ ಹಿನ್ನೆಲೆ 5 ವರ್ಷಗಳ ವಿಳಂಬದ ನಂತರ ಕರ್ನಾಟಕ ರಾಜ್ಯ ಸರ್ಕಾರ ವಾರ್ಷಿಕ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಿದೆ. 2019ನೇ ಸಾಲಿನ ಪ್ರಶಸ್ತಿ ಇದಾಗಿದ್ದು, ಅತ್ಯುತ್ತಮ ನಟ ಪ್ರಶಸ್ತಿಯನ್ನು ಅಭಿನಯ ಚಕ್ರವರ್ತಿ ಸುದೀಪ್ ಅವರಿಗೆ ಘೋಷಿಸಲಾಗಿದೆ. 'ಪೈಲ್ವಾನ್' ಚಿತ್ರದ ಅಭಿನಯಕ್ಕಾಗಿ ಸುದೀಪ್ ಅತ್ಯುತ್ತಮ ನಟ ಗೌರವಕ್ಕೆ ಪಾತ್ರರಾಗಿದ್ದು, ಇದೀಗ ಈ ಬಗ್ಗೆ ಸುದೀಪ್ ಟ್ವೀಟ್ ಮಾಡಿದ್ದಾರೆ.
ಸುದೀಪ್ ಟ್ವೀಟ್ನಲ್ಲೇನಿದೆ? ''ಗೌರವಾನ್ವಿತ ಕರ್ನಾಟಕ ಸರ್ಕಾರ ಹಾಗೂ ಜೂರಿ ಸದಸ್ಯರೇ, ಅತ್ಯುತ್ತಮ ನಟ ವಿಭಾಗದಲ್ಲಿ ರಾಜ್ಯ ಪ್ರಶಸ್ತಿ ಘೋಷಣೆಯಾಗಿರುವುದು ನಿಜಕ್ಕೂ ಒಂದು ಭಾಗ್ಯ. ಈ ಗೌರವಕ್ಕಾಗಿ ಗೌರವಾನ್ವಿತ ತೀರ್ಪುಗಾರರಿಗೆ ನನ್ನ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಅದಾಗ್ಯೂ, ನಾನು ಹಲವು ವರ್ಷಗಳಿಂದ ಪ್ರಶಸ್ತಿಗಳನ್ನು ಪಡೆಯುವುದನ್ನು ನಿಲ್ಲಿಸಿದ್ದೇನೆ. ವೈಯಕ್ತಿಕ ಕಾರಣಗಳಿಂದಾಗಿ ಈ ನಿರ್ಧಾರ ಕೈಗೊಂಡಿದ್ದು, ಅದನ್ನು ಮುಂದುವರಿಸುತ್ತಿದ್ದೇನೆ. ಕಲೆಗೆ ತಮ್ಮನ್ನು ಸಮರ್ಪಿಸಿದ ಅನೇಕ ಅರ್ಹ ಕಲಾವಿದರಿದ್ದಾರೆ. ಈ ಪ್ರತಿಷ್ಠಿತ ಮನ್ನಣೆಯನ್ನು ಅವರು ಹೆಚ್ಚು ಪ್ರಶಂಸಿಸುತ್ತಾರೆ. ಅವರಲ್ಲಿ ಒಬ್ಬರು ಪ್ರಶಸ್ತಿ ಪಡೆಯುವುದನ್ನು ನೋಡೋದು ನನಗೆ ಖುಷಿ ನೀಡುತ್ತದೆ''.
''ಪ್ರಶಸ್ತಿಗಳ ನಿರೀಕ್ಷೆಯಿಲ್ಲದೇ ಜನರನ್ನು ಮನರಂಜಿಸೋದರಲ್ಲಿ ನನ್ನನ್ನು ಸಮರ್ಪಿಸಿಕೊಂಡಿದ್ದೇನೆ. ತೀರ್ಪುಗಾರರ ಈ ನಿರ್ಧಾರ ಶ್ರೇಷ್ಠತೆಗಾಗಿ ಶ್ರಮಿಸುವುದನ್ನು ಮುಂದುವರಿಸಲು ನನಗೆ ಉತ್ತೇಜನ ನೀಡುತ್ತದೆ''.
''ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ನಾನು ಪ್ರತೀ ಜೂರಿ (ತೀರ್ಪುಗಾರರು) ಸದಸ್ಯರಿಗೂ ಕೃತಜ್ಞನಾಗಿದ್ದೇನೆ. ಏಕೆಂದರೆ, ಈ ಮನ್ನಣೆಯೇ ನನ್ನ ಕೆಲಸದ ಪ್ರತಿಫಲ. ನನ್ನ ನಿರ್ಧಾರ ನಿಮಗೆ ನಿರಾಶೆಯಾಗಬಹುದು, ತೀರ್ಪುಗಾರ ತಂಡದ ಸದಸ್ಯರು ಮತ್ತು ರಾಜ್ಯ ಸರ್ಕಾರದಲ್ಲಿ ಕ್ಷಮೆಯಾಚಿಸುತ್ತೇನೆ. ನೀವು ನನ್ನ ನಿರ್ಧಾರವನ್ನು ಗೌರವಿಸುತ್ತೀರಿ ಮತ್ತು ನಾನು ಆಯ್ಕೆ ಮಾಡಿದ ಹಾದಿಯಲ್ಲಿ ಮುನ್ನಡೆಯಲು ನನ್ನನ್ನು ಬೆಂಬಲಿಸುತ್ತೀರಿ ಎಂದು ನಾನು ನಂಬುತ್ತೇನೆ''.
''ಮತ್ತೊಮ್ಮೆ, ನನ್ನ ಕೆಲಸವನ್ನು ಗುರುತಿಸಿ ಈ ಪ್ರಶಸ್ತಿಗೆ ಪರಿಗಣಿಸಿದ್ದಕ್ಕಾಗಿ ಗೌರವಾನ್ವಿತ ತೀರ್ಪುಗಾರ ಸದಸ್ಯರು ಮತ್ತು ರಾಜ್ಯ ಸರ್ಕಾರಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ'' ಎಂದು ಬರೆದುಕೊಂಡಿದ್ದಾರೆ.