'ಕಣ್ಣಪ್ಪ', ಭಾರತೀಯ ಚಿತ್ರರಂಗದ ಒಂದು ಮಹತ್ವಾಕಾಂಕ್ಷೆಯ ಚಿತ್ರವಾಗಿದ್ದು, ದಕ್ಷಿಣ ಚಿತ್ರರಂಗದ ಖ್ಯಾತ ನಟ ವಿಷ್ಣು ಮಂಚು ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ. ಬಹು ದೊಡ್ಡ ತಾರಾಗಣದೊಂದಿಗೆ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರದಲ್ಲಿ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರತಂಡ ಅವರ ಪಾತ್ರವನ್ನು ಪರಿಚಯಿಸುವ ಪೋಸ್ಟರ್ ಹಂಚಿಕೊಂಡಿದೆ.
ಹೌದು, ಸಲಾರ್ ಸ್ಟಾರ್ ಪ್ರಭಾಸ್ ರುದ್ರನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಅದರಂತೆ, ಇಂದು ಅನಾವರಣಗೊಂಡಿರುವ ಪೋಸ್ಟರ್ ರೆಬೆಲ್ ಸ್ಟಾರ್ನನ್ನು ರುದ್ರನಾಗೇ ಪರಿಚಯಿಸಿದೆ. ಪೋಸ್ಟರ್ಗೆ, ಪರಾಕ್ರಮಿ 'ರುದ್ರ'. ರೆಬೆಲ್ ಸ್ಟಾರ್ ಪ್ರಭಾಸ್ ಅವರನ್ನು ಇಂದು 'ರುದ್ರ'ನಾಗಿ ಅನಾವರಣಗೊಳಿಸಲಾಗುತ್ತಿದೆ. ಕಣ್ಣಪ್ಪ ಚಿತ್ರದಲ್ಲಿ ದೈವಿಕ ಶಕ್ತಿ, ಬುದ್ಧಿವಂತಿಕೆ ಮತ್ತು ರಕ್ಷಕನ ಶಕ್ತಿಯಾಗಿ ರುದ್ರ ಕಾಣಿಸಿಕೊಳ್ಳಲಿದ್ದಾನೆ. ಭಕ್ತಿ, ತ್ಯಾಗ ಮತ್ತು ಅಚಲ ಪ್ರೀತಿಯ ಅಸಾಧಾರಣ ಪ್ರಯಾಣದ ಪ್ರಾರಂಭ. ಈ ಏಪ್ರಿಲ್ನಲ್ಲಿ ಬಿಗ್ ಸ್ಕ್ರೀನ್ ಮೇಲೆ ಈ ಮಹಾಕಾವ್ಯ ವೀಕ್ಷಿಸಿ! ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಕಣ್ಣಪ್ಪ ಏಪ್ರಿಲ್ಗೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ ಎಂದು ತಿಳಿಸಿದ್ದಾರೆ.
ಬಹುನಿರೀಕ್ಷಿತ ಸಿನಿಮಾ ಬಿಗ್ ಬಜೆಟ್, ಅತ್ಯಾಧುನಿಕ ತಂತ್ರಜ್ಞಾನದ ಸಹಾಯದೊಂದಿಗೆ ನಿರ್ಮಾಣಗೊಳ್ಳುತ್ತಿದೆ. ಈ ಪ್ರಾಜೆಕ್ಟ್ ಘೋಷಣೆಯಾದ ಸಂದರ್ಭ, ಪ್ರಭಾಸ್ ಮತ್ತು ನಯನತಾರಾ ಶಿವ ಪಾರ್ವತಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು. ಆದ್ರೆ, ಕಾಜಲ್ ಪಾರ್ವತಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿತು. ಉಳಿದಂತೆ ಮೋಹನ್ ಲಾಲ್, ಶಿವರಾಜ್ಕುಮಾರ್, ಆರ್.ಶರತ್ ಕುಮಾರ್, ಬ್ರಹ್ಮಾನಂದಂ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸ್ಟೀಫನ್ ದೇವಸ್ಸೆ ಮತ್ತು ಮಣಿ ಶರ್ಮಾ ಸಂಗೀತ ಸಂಯೋಜಿಸುತ್ತಿದ್ದಾರೆ.