ನವದೆಹಲಿ: ಬಾಲಿವುಡ್ ನಟಿ, ರಾಜಕಾರಣಿ ಕಂಗನಾ ರಣಾವತ್ ನಟನೆಯ ಬಹುನಿರೀಕ್ಷಿತ ಚಿತ್ರ 'ಎಮರ್ಜೆನ್ಸಿ'. ನಟಿಯ ನಿರ್ದೇಶನದ ಚೊಚ್ಚಲ ಚಿತ್ರಕ್ಕಿನ್ನೂ ಬಿಡುಗಡೆ ಭಾಗ್ಯ ಒದಗಿಲ್ಲ. ಈ ಮೊದಲೇ ತಿಳಿಸಿದಂತೆ ಚಿತ್ರ ಇಂದು ಚಿತ್ರಮಂದಿರಗಳನ್ನು ಪ್ರವೇಶಿಸಬೇಕಿತ್ತು. ಆದ್ರೆ 'ಎಮರ್ಜೆನ್ಸಿ'ಯನ್ನು ಮುಂದೂಡಲಾಗಿದೆ, ಹೊಸ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ನಟಿ ತಿಳಿಸಿದ್ದಾರೆ.
ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕಂಗನಾ ರಣಾವತ್ ಈ ಪೊಲಿಟಿಕಲ್ ಪೀರಿಯಡ್ ಡ್ರಾಮಾವನ್ನು ಬರೆದು, ಸಹ-ನಿರ್ಮಿಸಿ, ಆ್ಯಕ್ಷನ್ ಕಟ್ ಹೇಳುವುದರ ಜೊತೆಗೆ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಬಿಗ್ ಪ್ರಾಜೆಕ್ಟ್ ಇಂದು ದೇಶಾದ್ಯಂತ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಬೇಕಿತ್ತು. ಆದ್ರೆ ಚಿತ್ರತಯಾರಕರಿನ್ನೂ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (ಸಿಬಿಎಫ್ಸಿ)ನಿಂದ ಅನುಮತಿ ಪಡೆದಿಲ್ಲ ಮತ್ತು ಸಿನಿಮಾ ಪ್ರಸ್ತುತ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದೆ.
ಸಿನಿಮಾ ಬಿಡುಗಡೆ ಮುಂದೂಡಿಕೆ ಬಗ್ಗೆ ಕಂಗನಾ ರಣಾವತ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಶೇರ್ ಮಾಡಿದ್ದಾರೆ. "ನಾನು ನಿರ್ದೇಶಿಸಿರುವ 'ತುರ್ತು ಪರಿಸ್ಥಿತಿ' ಸಿನಿಮಾವನ್ನು ಮುಂದೂಡಲಾಗಿದೆ ಎಂಬುದನ್ನು ಬಹಳ ದುಃಖದಿಂದ ಘೋಷಿಸುತ್ತಿದ್ದೇನೆ. ನಾವಿನ್ನೂ ಸೆನ್ಸಾರ್ ಮಂಡಳಿಯಿಂದ ಪ್ರಮಾಣೀಕರಣಕ್ಕಾಗಿ ಕಾಯುತ್ತಿದ್ದೇವೆ. ಸಿನಿಮಾದ ಹೊಸ ಅಧಿಕೃತ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಿದ್ದೇವೆ. ನೀವು ಅರ್ಥಮಾಡಿಕೊಂಡಿರುವುದಕ್ಕೆ ಮತ್ತು ತಾಳ್ಮೆಗೆ ಧನ್ಯವಾದಗಳು" ಎಂದು ಬರೆದುಕೊಂಡಿದ್ದಾರೆ.
ಹಿಮಾಚಲ ಪ್ರದೇಶದ ಬಿಜೆಪಿ ಸಂಸದೆ, ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಅವರ ಪಾತ್ರವನ್ನು ನಿರೂಪಿಸಿದ್ದು ಇತ್ತೀಚೆಗೆ ತಮ್ಮ 'ಎಕ್ಸ್' ಖಾತೆಯಲ್ಲಿ ಅಸಮಧಾನ ಹೊರಹಾಕಿದ್ದರು. ಸಿಬಿಎಫ್‌ಸಿಯು ತಮ್ಮ ಸಿನಿಮಾ ಬಿಡುಗಡೆಯನ್ನು ವಿಳಂಬಗೊಳಿಸುವ ಸಲುವಾಗಿ ಸಿನಿಮಾದ ಪ್ರಮಾಣೀಕರಣವನ್ನು ಸ್ಥಗಿತಗೊಳಿಸಿದ್ದಾರೆ ಎಂದು ಆರೋಪಿಸಿದ್ದರು. ಶಿರೋಮಣಿ ಅಕಾಲಿ ದಳ ಸೇರಿದಂತೆ ಸಿಖ್ ಸಂಘಟನೆಗಳು ತಮ್ಮ ಸಮುದಾಯವನ್ನು ಸರಿಯಾಗಿ ತೋರಿಸಿಲ್ಲ ಮತ್ತು ಸತ್ಯಾಂಶವನ್ನು ಪ್ರದರ್ಶಿಸಿಲ್ಲ (ಟ್ರೇಲರ್, ಟೀಸರ್ಗಳಲ್ಲಿ) ಎಂದು ಆರೋಪಿಸಿದ್ದು, 'ಎಮರ್ಜೆನ್ಸಿ'ಯೀಗ ವಿವಾದಕ್ಕೆ ಸಿಲುಕಿದೆ.