ಬಹುತೇಕ ಚಿತ್ರಮಂದಿರಗಳಲ್ಲೀಗ ನಾಗ್ ಅಶ್ವಿನ್ ನಿರ್ದೇಶನದ 'ಕಲ್ಕಿ 2898 ಎಡಿ' ಚಿತ್ರದ್ದೇ ಸದ್ದುಗದ್ದಲ. ಬಹುತಾರಾಗಣದ ಚಿತ್ರ ಪ್ರಸ್ತುತ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ದುಡ್ಡು ದೋಚುತ್ತಿದೆ. ಅಂದಾಜು 600 ಕೋಟಿ ರೂ ವೆಚ್ಚದ ಪುರಾಣ-ವಿಜ್ಞಾನ ಕಥೆಯಾಧರಿತ ಚಿತ್ರ ವಿಶ್ವಾದ್ಯಂತ 700 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಹುಬ್ಬೇರಿಸಿದೆ. ಇದೀಗ ಸಿನಿಪ್ರಿಯರ ಗಮನ ಸೀಕ್ವೆಲ್ ಮೇಲಿದೆ.
ಇತ್ತೀಚೆಗೆ 'ಕಲ್ಕಿ'ಯ ಮತ್ತೊಂದು ಭಾಗ ಬರಲಿದೆ ಎಂಬುದನ್ನು ಚಿತ್ರತಂಡ ಪ್ರಕಟಿಸಿದೆ. ಈ ಕುರಿತು ನಿರ್ಮಾಪಕ ಅಶ್ವಿನಿದತ್ ಈಗಾಗಲೇ ಹಲವು ಬಾರಿ ಮಾತನಾಡಿದ್ದಾರೆ. ಈಚೆಗಷ್ಟೇ ನಾಗ್ ಅಶ್ವಿನ್ ಕೂಡ ಸೀಕ್ವೆಲ್ ಬಗ್ಗೆ ಪ್ರತಿಕ್ರಿಯಿಸಿದ್ದರು. ಭಾಗ 2ರಲ್ಲಿ ನಿಜವಾದ ಕಥೆ ಪ್ರಾರಂಭವಾಗುತ್ತದೆ ಎಂದಿದ್ದರು.
"ಮುಂದಿನ ಭಾಗಕ್ಕೆ ಸಂಬಂಧಿಸಿದಂತೆ ನಾವು ಸುಮಾರು ಒಂದು ತಿಂಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ. ಶೇಕಡಾ 20ರಷ್ಟು ಭಾಗ ಉತ್ತಮವಾಗಿ ಮೂಡಿಬಂದಿದೆ. ಇನ್ನೂ ಹಲವು ಪ್ರಮುಖ ಸಾಹಸ ದೃಶ್ಯಗಳ ಚಿತ್ರೀಕರಣ ಬಾಕಿ ಉಳಿದಿದೆ. ಸೀಕ್ವೆಲ್ನಲ್ಲಿ ಪ್ರಭಾಸ್, ಕಮಲ್ ಹಾಸನ್ ಮತ್ತು ಅಮಿತಾಭ್ ಬಚ್ಚನ್ ನಡುವೆ ಅದ್ಧೂರಿ ಸಾಹಸ ದೃಶ್ಯಗಳು ಇರಲಿವೆ. ಶಕ್ತಿಶಾಲಿ ಸಾಹಸ ದೃಶ್ಯಗಳನ್ನು ಇಲ್ಲಿ ಕಾಣಬಹುದು'' ಎಂದು ತಿಳಿಸಿದರು.
ಇದೇ ವೇಳೆ, ಪ್ರೇಕ್ಷಕರಿಂದ ಈ ಸಿನಿಮಾ ಸ್ವೀಕರಿಸಿದ ಅದ್ಧೂರಿ ಸ್ವಾಗತದ ಬಗ್ಗೆಯೂ ಸಂತಸ ವ್ಯಕ್ತಪಡಿಸಿದರು. "ಪ್ರೇಕ್ಷಕರು ಸಿನಿಮಾವನ್ನು ಎಂಜಾಯ್ ಮಾಡುತ್ತಿದ್ದಾರೆ. ಕಲ್ಕಿಯನ್ನು ಹಲವರು ಒಂದಕ್ಕಿಂತ ಹೆಚ್ಚು ಬಾರಿ ನೋಡಿದ್ದಾರೆ. ಅದು ಸಿನಿಮಾದ ಯಶಸ್ಸಿನ ಸಂಕೇತ" ಎಂದರು.