ಬೆಂಗಳೂರು: ಗುರುವಾರ ಇಹಲೋಕ ತ್ಯಜಿಸಿದ ನಟ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕೆ. ಶಿವರಾಮ್ ಅವರ ಪಾರ್ಥೀವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿದೆ. ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಸೇರಿದಂತೆ ಹಲವರು ಶಿವರಾಮ್ ಅವರ ಅಂತಿ ದರ್ಶನ ಪಡೆಯುತ್ತಿದ್ದಾರೆ.
ಶಿವರಾಮ್ ಅವರ ಅಂತ್ಯಕ್ರಿಯೆ ಸ್ಥಳದ ಬಗ್ಗೆ ಮಾತುಕತೆ ನಡೆಯುತ್ತಿದ್ದು, ಕೆಂಗೇರಿಯ ಛಲವಾದಿ ಮಹಾಸಭಾ ಆವರಣದಲ್ಲಿ ಅಂತ್ಯಕ್ರಿಯೆ ನಡೆಸಲು ಬೆಂಗಲಿಗರು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಬೆಂಗಲಿಗರು ಸರ್ಕಾರಕ್ಕೂ ಮನವಿ ನೀಡಿದ್ದಾರೆ. ಸಚಿವ ಹೆಚ್ ಸಿ ಮಹಾದೇವಪ್ಪ ಅವರಿಗೆ ಮನವಿ ಮಾಡಿದ್ದಾರೆ. ಸಚಿವರು ಸಿಎಂ ಸಿದ್ದರಾಮಯ್ಯ ಜೊತೆ ಮಾತುಕತೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಸರ್ಕಾರದಿಂದ ಅನುಮತಿ ಸಿಕ್ಕರೆ ಕೆಂಗೇರಿಯಲ್ಲಿರುವ ಛಲವಾದಿ ಸಭಾಂಗಣ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. ಇಲ್ಲದಿದ್ದರೆ, ಬಿಡದಿಯಲ್ಲಿರುವ ಶಿವರಾಮ್ ಅವರ ಜಮೀನಿನಲ್ಲಿ ಅಂತಿಮ ವಿಧಿ-ವಿಧಾನಗಳು ನೆರವೇರಲಿವೆ.
ನಿರ್ಮಾಪಕ ಸಾರಾ ಗೋವಿಂದು ಮಾತನಾಡಿ, "ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆದು ಕನ್ನಡಿಗರ ಮನಸ್ಸು ಗೆದ್ದವರು ಶಿವರಾಮ್. ನಾನು ಸುಮಾರು 50 ರಿಂದ 75 ಸಮಾರಂಭಗಳಲ್ಲಿ ಅವರನ್ನು ಗೌರವಿಸಿದ್ದೆ. 'ಬಾ ನಲ್ಲೆ ಮಧು ಚಂದ್ರಕೆ' ಸಿನಿಮಾದ ಸಬ್ಜೆಕ್ಟ್ ನನ್ನ ಬಳಿ ಇತ್ತು. ನಾಗತಿಹಳ್ಳಿ ಅವರು ಕೇಳಿದಾಗ ಬಿಟ್ಟುಕೊಟ್ಟಿದ್ದೆ. ಶಿವರಾಮ್ ಅವರ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ" ಎಂದು ಸಂತಾಪ ಸೂಚಿಸಿದರು.
ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ. ಸುರೇಶ್ ಮಾತನಾಡಿ, "ಶಿವರಾಮ್ ಅವರು ಸಾಕಷ್ಟು ಜನರಿಗೆ ಸಹಾಯ ಮಾಡಿದ್ದಾರೆ. ಆನೇಕಲ್, ದಾವಣಗೆರೆ ಭಾಗಗಳಲ್ಲಿ ಬಡವರಿಗೆ ಸಾಕಷ್ಟು ನೆರವಾಗಿದ್ದಾರೆ. ಎಲ್ಲರಿಗೂ ಗೌರವ ನೀಡುತ್ತಿದ್ದರು. ಅವರ ಪರ ನನ್ನಿಂದ ಸಾಧ್ಯವಾದ ಕಾರ್ಯಗಳನ್ನು ಮಾಡುತ್ತೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ಹೇಳಿದರು.