ಇತ್ತೀಚೆಗೆ ಕನ್ನಡ ಚಿತ್ರರಂಗದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಹಾಗೂ ಮಾಲಿವುಡ್ ಸೂಪರ್ ಸ್ಟಾರ್ ಜಯಸೂರ್ಯ ಭೇಟಿಯಾಗಿದ್ದು, ಈಗಾಗಲೇ ಹಲವು ಫೋಟೋಗಳು ವಿವಿಧ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಲಭ್ಯ ಇವೆ. ಇದೀಗ ಮಲಯಾಳಂ ನಟ ಮತ್ತೊಂದು ಫೋಟೋ ಹಂಚಿಕೊಂಡು ಗಮನ ಸೆಳೆದಿದ್ದಾರೆ.
ಇತ್ತೀಚೆಗಷ್ಟೇ ಮಲಯಾಳಂ ಚಿತ್ರರಂಗದಲ್ಲಿ ಹೆಸರು ಮಾಡಿರುವ ಜಯಸೂರ್ಯ ಅವರು ತಮ್ಮ ಕುಟುಂಬದೊಂದಿಗೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದರು. ಮೂರು ದಿನಗಳ ಹಿಂದಷ್ಟೇ ತಮ್ಮ ಅಧಿಕೃತ ಇನ್ಇನ್ಸ್ಟಾಗ್ರಾಮ್ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದರು.
ಕಳೆದ ದಿನ ಮತ್ತೊಂದು ಹೊಸ ಫೋಟೋ ಹಂಚಿಕೊಂಡು ಗಮನ ಸೆಳೆದಿದ್ದಾರೆ. ಚಂದನವನದ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಈ ಫೋಟೋದ ಹೈಲೆಟ್ ಅನ್ನಬಹುದು. ರಿಷಬ್ - ಪ್ರಗತಿ ಜೊತೆಗಿನ ಫೋಟೋ ಹಂಚಿಕೊಂಡಿರುವ ಜಯಸೂರ್ಯ, ಫೋಟೋಗೆ ಶ್ರೀ ಮೂಕಾಂಬಿಕಾ ದೇವಸ್ಥಾನ, ಕೊಲ್ಲೂರು ಲೊಕೇಶನ್ ಕೊಟ್ಟಿದ್ದಾರೆ. ರಿಷಬ್ ದಂಪತಿ ಜೊತೆ, ಜಯಸೂರ್ಯ ಪತ್ನಿ ಸರಿತಾ ಮತ್ತು ಜೈಲರ್ ವಿಲನ್ ಅನ್ನೂ ಈ ಫೋಟೋದಲ್ಲಿ ಕಾಣಬಹುದು. ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಟ ರಿಷಬ್ ಶೆಟ್ಟಿ ನಟನೆಯ ಮುಂದಿನ ಸಿನಿಮಾಗಳನ್ನು ಗಮನಿಸೋದಾದ್ರೆ, 2022ರ ಬ್ಲಾಕ್ಬಸ್ಟರ್ ಕಾಂತಾರ ಚಿತ್ರದ ಪ್ರೀಕ್ವೆಲ್ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದಾರೆ. ಡಿವೈನ್ ಸ್ಟಾರ್ ನಟಿಸಿ, ನಿರ್ದೇಶಿಸುತ್ತಿರುವ ಸಿನಿಮಾ ಇದೇ ಸಾಲಿನಲ್ಲಿ ತೆರೆಗಪ್ಪಳಿಸಲಿದ್ದು, ಪ್ರೇಕ್ಷಕರು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಸಿನಿಮಾ ಮೊದಲ ಭಾಗಕ್ಕಿಂತಲೂ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ.