ಕನ್ನಡದ ಅತ್ಯಂತ ಜನಪ್ರಿಯ ಕಿರುತೆರೆ ಕಾರ್ಯಕ್ರಮ 'ಬಿಗ್ ಬಾಸ್ ಸೀಸನ್ 11'ರಲ್ಲಿ ಹಲವು ಮಹತ್ವದ ಘಟನೆಗಳು ಜರುಗುತ್ತಿವೆ. ಯಾವ ಸೀಸನ್ಗಳಲ್ಲೂ ಮೊದಲೆರಡು ವಾರಗಳಲ್ಲಿ ನಡೆಯದ ಜಗಳ, ವಾದ ವಿವಾದ, ಕಿರುಚಾಟ ಎಲ್ಲಕ್ಕಿಂತ ಹೆಚ್ಚಾಗಿ ರೂಲ್ಸ್ ಬ್ರೇಕ್ ಈ ಸೀಸನ್ನ ಮೊದಲೆರಡು ವಾರದಲ್ಲೇ ನಡೆದಿದೆ. ಮನೆಯಲ್ಲಿ ಅತಿ ಹೆಚ್ಚು ಬಾರಿ ನಿಯಮಗಳನ್ನು ಮುರಿದಿರುವ ಜಗದೀಶ್ ಮತ್ತೆ ಬೇಜವಾಬ್ದಾರಿಯಿಂದ ವರ್ತಿಸಿದಂತೆ ತೋರಿದೆ. ಇದರ ಸುಳಿವನ್ನು ಬಿಗ್ ಬಾಸ್ ಪ್ರೋಮೋ ಬಿಟ್ಟುಕೊಟ್ಟಿದೆ.
ಬಿಗ್ ಬಾಸ್ ಮೂರನೇ ವಾರಕ್ಕೆ ಕಾಲಿಟ್ಟಿದೆ. ಮೊದಲ ವಾರದಲ್ಲಿ ನಟಿ ಯಮುನಾ ಶ್ರೀನಿಧಿ ಎಲಿಮಿನೇಟ್ ಆಗಿದ್ದರು. ಎರಡನೇ ವಾರ ಯಾವುದೇ ಎಲಿಮಿನೇಶನ್ ನಡೆದಿಲ್ಲ. ವಾರದ ಕತೆ ಕಿಚ್ಚನ ಜೊತೆ ಮತ್ತು ಸೂಪರ್ ಸಂಡೇ ವಿತ್ ಸುದೀಪ್ ಸಂಚಿಕೆಗಳು ಶನಿವಾರ ಮತ್ತು ಭಾನುವಾರ ಯಶಸ್ವಿಯಾಗಿ ಮೂಡಿಬಂದ ಬೆನ್ನಲ್ಲೇ, ಅಭಿನಯ ಚಕ್ರವರ್ತಿ ಸುದೀಪ್ ತಮ್ಮ ನಿರೂಪಣೆಗೆ ವಿದಾಯ ಘೋಷಿಸಿದ್ದಾರೆ. ಮುಂದಿನ ಸೀಸನ್ಗಳನ್ನು ನಾನು ನಡೆಸಿಕೊಡುವುದಿಲ್ಲ ಎಂದು ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಬಿಗ್ ಬಾಸ್ ಕೂಡಾ ಸ್ಪರ್ಧಿಗಳ ವರ್ತನೆ ವಿರುದ್ಧ ಆಕ್ರೋಶಗೊಂಡು ಮನೆಯಿಂದ ಹೊರನಡೆದಿದ್ದಾರೆ. ಇಷ್ಟಾದ್ರೂ ಸ್ಪರ್ಧಿ ಜಗದೀಶ್ ತಮಗೆ ಬೇಕಾದಂತೆ ವರ್ತಿಸತೊಡಗಿದ್ದಾರೆ.
''ಕೇಳೋರಿಗೆ ಹೇಳ್ಬೋದು, ಕೇಳದೆ ಇದ್ದೋರಿಗೆ...?'' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನೊಂದಿಗೆ ವಿವಿಧ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಬಿಗ್ ಬಾಸ್ ಕನ್ನಡ ಪ್ರೋಮೋ ಅನಾವರಣಗೊಳಿಸಿದೆ. ಬೆಳಗ್ಗಿನ ಪ್ರೋಮೋದಲ್ಲಿ, ಸ್ಪರ್ಧಿಗಳ ವರ್ತನೆಗೆ ಆಕ್ರೋಶಗೊಂಡ ಬಿಗ್ ಬಾಸ್ ಮನೆಯಿಂದ ಹೊರನಡೆಯುತ್ತಿದ್ದೇನೆ, ಬ್ರೇಕ್ ತೆಗೆದುಕೊಳ್ಳುತ್ತಿದ್ದೇನೆ ಎಂಬ ಬಹಳ ಸಿಟ್ಟಿನಲ್ಲಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಮನೆಯ ಸ್ಪರ್ಧಿಗಳು ಆತಂಕಕ್ಕೊಳಗಾಗಿದ್ದರು. ಆದ್ರೆ ಜಗದೀಶ್ ಮಾತ್ರ ಕ್ಯಾರೇ ಇಲ್ಲ ಎನ್ನುವಂತೆ ವರ್ತಿಸಿದ್ದಾರೆ.