ಜನಪ್ರಿಯ ಕಿರುತೆರೆ ತಾರೆ ಹೀನಾ ಖಾನ್ ಮೂರನೇ ಹಂತದ ಸ್ತನ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಚಿಕಿತ್ಸೆ ಪ್ರಾರಂಭವಾಗಿದ್ದು, ಉತ್ತಮವಾಗಿದ್ದೇನೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಈ ಸವಾಲನ್ನು ಜಯಿಸುವ ಸಂಕಲ್ಪ ತೊಟ್ಟಿದ್ದು, ಅಭಿಮಾನಿಗಳಿಂದ ಪ್ರಾರ್ಥನೆ ಮತ್ತು ಬೆಂಬಲವನ್ನು ಅಪೇಕ್ಷಿಸಿದ್ದಾರೆ.
ತಾಹಿರಾ ಕಶ್ಯಪ್: 2018ರಲ್ಲಿ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅವರ ಬಾಳ ಸಂಗಾತಿ, ಲೇಖಕಿ - ನಿರ್ದೇಶಕಿ ತಾಹಿರಾ ಕಶ್ಯಪ್ ಸ್ತನ ಕ್ಯಾನ್ಸರ್ನಿಂದ ಬಳಲಿದ್ದರು. ಆದರೀಗ ಅವರು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಆದರೆ ತಮ್ಮ ಈ ಕಠಿಣ ಹೋರಾಟವನ್ನು ಪ್ರಪಂಚದಿಂದ ಮರೆಮಾಚಲಿಲ್ಲ. ಬದಲಾಗಿ ಎಲ್ಲರೊಂದಿಗೂ ಹಂಚಿಕೊಳ್ಳುವ ಮೂಲಕ, ಮಹಿಳೆಯರಲ್ಲಿ ಧೈರ್ಯ ತುಂಬಿದರು. ಬೋಳು ತಲೆಯ ಚಿತ್ರಗಳಿಂದ ಹಿಡಿದು ಕ್ಯಾನ್ಸರ್ನ ಕಠಿಣ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಈ ಕಾಯಿಲೆ ವಿರುದ್ಧ ಹೋರಾಡುತ್ತಿರುವ ಇತರ ಮಹಿಳೆಯರಲ್ಲಿ ಗುಣಮುಖರಾಗುವ ಭರವಸೆ ಮೂಡಿಸಿದ್ದರು. 2019ರಲ್ಲಿ ಚಿಕಿತ್ಸೆ ಪೂರ್ಣಗೊಂಡು, ಕ್ಯಾನ್ಸರ್ ಮುಕ್ತರಾದರು. ಮೈ-ಎಕ್ಸ್ ಬ್ರೆಸ್ಟ್ ಎಂಬ ಪಾಡ್ಕಾಸ್ಟ್ ಮೂಲಕ ತಮ್ಮ ಕ್ಯಾನ್ಸರ್ ವಿರುದ್ಧದ ಹೋರಾಟದ ದಿನಗಳ ಬಗ್ಗೆ ಮತ್ತು ಅವರ ಮಾನಸಿಕ ಯೋಗಕ್ಷೇಮ ಮತ್ತು ಕುಟುಂಬದ ಮೇಲೆ ಪರಿಣಾಮ ಬೀರುವ ಬಗ್ಗೆ ಮಾತನಾಡಿದ್ದರು.
ಬಾರ್ಬರಾ ಮೋರಿ:ತಮ್ಮ ಚೊಚ್ಚಲ ಚಿತ್ರ ಕೈಟ್ಸ್ನಲ್ಲಿ ಹೃತಿಕ್ ರೋಷನ್ ಜೊತೆ ತೆರೆಹಂಚಿಕೊಂಡು ಗಮನ ಸೆಳೆದ ಮೆಕ್ಸಿಕನ್ ನಟಿ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದಿದ್ದಾರೆ. ತಮ್ಮ 29ನೇ ವಯಸ್ಸಿನಲ್ಲಿ, ವೃತ್ತಿಜೀವನದ ಆರಂಭದಲ್ಲಿಯೇ ಸ್ತನ ಕ್ಯಾನ್ಸರ್ಗೆ ಇವರು ತುತ್ತಾಗಿದ್ದರು. ಆರಂಭಿಕ ಹಂತದಲ್ಲೇ ಪತ್ತೆಯಾದ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲಾಗಿದೆ. ಅಂದಿನಿಂದ, ತಮ್ಮ ಬಗ್ಗೆ ಸರಿಯಾದ ಕಾಳಜಿ ವಹಿಸಲು ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಲು ಮಹಿಳೆಯರಲ್ಲಿ ಜಾಗೃತಿ ಮೂಡಿಸುವಲ್ಲಿ ಇವರು ಸಕ್ರಿಯರಾಗಿದ್ದಾರೆ.