ಗಾಜಾ ಪಟ್ಟಿಯ ದಕ್ಷಿಣದ ರಫಾದಲ್ಲಿನ ಕ್ಯಾಂಪ್ಗಳ ಮೇಲೆ ಇಸ್ರೇಲ್ ಭಾನುವಾರ ಸಂಜೆ ನಡೆಸಿದ ಬಾಂಬ್ ದಾಳಿಯಲ್ಲಿ 45ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಕೆಲವರು ಗಾಯಗೊಂಡಿದ್ದಾರೆ. ವಿಧ್ವಂಸಕ ಇಸ್ರೇಲಿ ವೈಮಾನಿಕ ದಾಳಿಯ ನಂತರ, ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಪ್ಪು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಪ್ಯಾಲೆಸ್ಟೈನ್ ಮೇಲಿನ ಇಸ್ರೇಲ್‌ನ ಇತ್ತೀಚಿನ ದಾಳಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕವಾಗಿ ಖಂಡಿಸಲಾಗುತ್ತಿದೆ. ಈ ಸಾಲಿನಲ್ಲಿ ಹಲವು ಭಾರತೀಯ ಸೆಲೆಬ್ರಿಟಿಗಳು ಸಹ ಸೇರಿದ್ದಾರೆ.
ರಫಾ ಮೇಲಿನ ಇತ್ತೀಚಿನ ಇಸ್ರೇಲ್ ದಾಳಿಯು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅನೇಕರು ಗಾಜಾದಲ್ಲಿ ಶೀಘ್ರ ಕದನ ವಿರಾಮಕ್ಕೆ ಕರೆ ನೀಡಿದ್ದಾರೆ. ಪ್ಯಾಲೆಸ್ಟೈನ್ ಜನರನ್ನು ಬೆಂಬಲಿಸಿ ಮಾತನಾಡಿದವರಲ್ಲಿಸೌತ್ ಸ್ಟಾರ್ ನಟಿ ಸಮಂತಾ ರುತ್ ಪ್ರಭು ಕೂಡ ಒಬ್ಬರು. ಇಸ್ರೇಲ್‌ನ ಕ್ರಮಗಳನ್ನು ಖಂಡಿಸುವ ಬರಹವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಸೆಕ್ಷನ್ನಲ್ಲಿ ಶೇರ್ ಮಾಡಿದ್ದಾರೆ.
ರಫಾದಲ್ಲಿ ಇಸ್ರೇಲ್ ತನ್ನ ಮಿಲಿಟರಿ ಆಕ್ರಮಣವನ್ನು ನಿಲ್ಲಿಸಬೇಕು ಎಂಬ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸಿ, ನಟಿ ರೀಶೇರ್ ಮಾಡಿರುವ ಒಂದು ಸ್ಟೊರಿ, ಕದನ ವಿರಾಮದ ಅಗತ್ಯವನ್ನು ಒತ್ತಿ ಹೇಳಿತು. "ರಾಫಾದಲ್ಲಿ ಇಸ್ರೇಲ್ ತನ್ನ ಮಿಲಿಟರಿ ಆಕ್ರಮಣವನ್ನು ತಕ್ಷಣವೇ ನಿಲ್ಲಿಸುವಂತೆ ಶುಕ್ರವಾರದಂದು ಐಸಿಜೆ ತೀರ್ಪು ನೀಡಿದ ನಂತರ ಈ ದಾಳಿ ಆಗಿದೆ. ಈ ಭಯಾನಕತೆ ಬಗ್ಗೆ ಹೇಳಲು ಯಾವುದೇ ಪದಗಳಿಲ್ಲ. ಮುಂದಿನ ಹೆಜ್ಜೆ ಇಡಲು ಎಲ್ಲಿಯೂ ಸುರಕ್ಷಿತವಾಗಿಲ್ಲ. ಇದು ತಕ್ಕಣ ನಿಲ್ಲಬೇಕು. ಕೂಡಲೇ ಕದನ ವಿರಾಮ" ಎಂದು ಬರೆಯಲಾಗಿದೆ.
ಪ್ಯಾಲೆಸ್ಟೈನ್ ಪರವಾಗಿ ಬಹು ಸಮಯದಿಂದ ದನಿ ಎತ್ತುತ್ತಾ ಬಂದಿರುವ ನಟಿ ಸ್ವರಾ ಭಾಸ್ಕರ್, ರಫಾ ದಾಳಿಯನ್ನು ಖಂಡಿಸಿದ್ದಾರೆ. ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ, ಹಿಂಸಾಚಾರದ ವಿರುದ್ಧ ತಮ್ಮ ಹತಾಶೆ ವ್ಯಕ್ತಪಡಿಸಿದ್ದಾರೆ. ಮಕ್ಕಳು ಸೇರಿದಂತೆ ಮುಗ್ಧ ನಾಗರಿಕರ ಸಾವಿಗೆ ಕಾರಣವಾಗಿರೋ ಈ ದಾಳಿಯನ್ನು ಕಟುವಾಗಿ ಖಂಡಿಸಿದ್ದಾರೆ. ದುಲ್ಕರ್ ಸಲ್ಮಾನ್ ಕೂಡ "ಎಲ್ಲ ಕಣ್ಣುಗಳು ರಾಫಾ ಮೇಲೆ" ಎಂದು ಬರೆದಿರುವ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಪ್ಯಾಲೆಸ್ಟೈನ್ಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.