ಲಾಸ್ ಏಂಜಲೀಸ್: 1997ರಲ್ಲಿ ಬಿಡುಗಡೆಯಾಗಿದ್ದ ಜನಪ್ರಿಯ ಸಿನಿಮಾ 'ಟೈಟಾನಿಕ್' ಅತಿ ಹೆಚ್ಚು ಆಸ್ಕರ್ ಪ್ರಶಸ್ತಿ ಗೆದ್ದ ಚಿತ್ರ. ಈ ಚಿತ್ರದ ಕ್ಲೈಮ್ಯಾಕ್ಸ್ ಅಂತೂ ಅನೇಕ ಸಿನಿ ಪ್ರಿಯರ ಮನಗೆದ್ದ ದೃಶ್ಯ. ಚಿತ್ರದ ನಟ ಜಾಕ್ ತಮ್ಮ ಪ್ರಿಯತಮೆ ರೋಸ್ ಜೀವ ಉಳಿಸಲು ಹಡಗಿನ ಬಾಗಿಲನ್ನು ಆಸರೆಯಾಗಿ ಪಡೆಯುತ್ತಾನೆ. ಚಿತ್ರದ ಪ್ರಮುಖ ಭಾಗವಾಗಿದ್ದ ಈ 'ತೇಲುವ ಬಾಗಿಲು' (floating door) ಇದೀಗ 5 ಕೋಟಿ ರೂಪಾಯಿ ಸಂಪಾದಿಸಿದೆ.
ಇತ್ತೀಚಿಗೆ ನಡೆದ ಸಿನಿಮಾಗಳಲ್ಲಿ ಬಳಕೆಯಾದ ಪಾರಂಪರಿಕ ವಸ್ತುಗಳ ಹರಾಜಿನಲ್ಲಿ ಈ ತೇಲುವ ಬಾಗಿಲು 5 ಕೋಟಿ (718.750 ಡಾಲರ್) ಮೊತ್ತಕ್ಕೆ ಮಾರಾಟವಾಗಿದೆ. ಹೆರಿಟೇಜ್ ಆಕ್ಷನ್ (ಪಾರಂಪರಿಕ ವಸ್ತುಗಳ ಹರಾಜು) ನಡೆಸಿದ ಪ್ಲಾನೆಟ್ ಹಾಲಿವುಡ್ ಹಾರಾಜಿನಲ್ಲಿ ಒಟ್ಟಾರೆ 1,56,80,000 ಮಿಲಿಯನ್ ಸಂಗ್ರಹಿಸಿದೆ ಎಂದು people.com ವರದಿ ಮಾಡಿದೆ.
ಈ ಹರಾಜಿನಲ್ಲಿ ಸಿನಿಮಾದ ಪ್ರಾಪ್ಸ್ (ರಂಗಪರಿಕರ) ಅಂದರೆ, ಚಿತ್ರೀಕರಣದ ಭಾಗವಾಗಿ ಬಳಕೆ ಮಾಡಿದ ಪ್ರಾಪರ್ಟಿಗಳನ್ನು ಮಾರಾಟ ಮಾಡಲಾಗಿದೆ. ಇದರಲ್ಲಿ 1984 ರ 'ಇಂಡಿಯಾನಾ ಜೋನ್ಸ್ ಮತ್ತು ಟೆಂಪಲ್ ಆಫ್ ಡೂಮ್' ಹ್ಯಾರಿಸನ್ ಫೋರ್ಡ್ ಬುಲ್‌ವಿಪ್ 1980ರ 'ದಿ ಶೈನಿಂಗ್' ಸಿನಿಮಾದ ಬಳಕೆಯಾದ ವಸ್ತುಗಳು ಹರಾಜಿನಲ್ಲಿ ಕಂಡು ಬಂದಿವೆ.