'ಸಲಾರ್', 'ಕೆಜಿಎಫ್ ಚಾಪ್ಟರ್ 2' ಸಿನಿಮಾಗಳ ಮೂಲಕ ಪ್ರಶಾಂತ್ ನೀಲ್ ಇಂಡಿಯನ್ ಸ್ಟಾರ್ ನಿರ್ದೇಶಕರಾಗಿ ಹೊರಹೊಮ್ಮಿದರು. 'ಕೆಜಿಎಫ್ ಚಾಪ್ಟರ್ 2', 'ಸಲಾರ್ 1' ಬಾಕ್ಸ್ ಆಫೀಸ್ನಲ್ಲಿ ಬಿರುಗಾಳಿ ಎಬ್ಬಿಸಿದ್ದು, ಭಾರತೀಯ ಚಲನಚಿತ್ರೋದ್ಯಮದ ಮೇಲೂ ಗಮನಾರ್ಹ ಪ್ರಭಾವ ಬೀರಿತು.
'ಕೆಜಿಎಫ್ 2' ಬಿಡುಗಡೆಯಾಗಿ ಒಂದು ವರ್ಷದ ನಂತರ ತೆರೆಗಪ್ಪಳಿಸಿದ 'ಸಲಾರ್ 1' ನಿರ್ದೇಶಕ ನೀಲ್ ಅವರ ಪಾಪ್ಯುಲಾರಿಟಿಯನ್ನು ದುಪ್ಪಟ್ಟುಗೊಳಿಸಿತು. ಇದೀಗ ನಿರ್ದೇಶಕರು 2023ರ ಡಿಸೆಂಬರ್ನಲ್ಲಿ ಬಿಡುಗಡೆಯಾದ 'ಸಲಾರ್' ಬಾಕ್ಸ್ ಆಫೀಸ್ ಪರ್ಫಾಮೆನ್ಸ್ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ, ಯಶ್ ನಟನೆಯ ಕೆಜಿಎಫ್ 2ನ ಅಭೂತಪೂರ್ವ ಯಶಸ್ಸಿನ ನಂತರ ಬಂದ ಈ ಸಿನಿಮಾದ ರಿಸಲ್ಟ್ನಿಂದಾಗಿ ಕೊಂಚ ಡಿಸಪಾಯಿಂಟ್ ಆದೆ ಎಂದರು.
ಕೆಜಿಎಫ್ ಅಧ್ಯಾಯ 2ರಿಂದ ತಾನು ಕಂಡ ಅಭೂತಪೂರ್ವ ಯಶಸ್ಸಿಗೆ ಹೋಲಿಸಿದರೆ, ಸಲಾರ್‌ನಿಂದ ಏಕೆ ಅಸಮಾಧಾನಗೊಂಡೆ ಎಂಬುದನ್ನು ಬಹಿರಂಗಪಡಿಸಿದರು. ಬಹುಶಃ ಕೆಜಿಎಫ್ 2ರ ಛಾಯೆ ಇತ್ತು. ಸಲಾರ್‌ನಿಂದ ಹೆಚ್ಚಿನದ್ದನ್ನು ನಿರೀಕ್ಷಿಸಿದ್ದೆ ಎಂದು ತಿಳಿಸಿದರು. ಜೊತೆಗೆ, ಸಲಾರ್ ಸೀಕ್ವೆಲ್ ಮೊದಲ ಭಾಗದಂತೆ ಇರುವುದಿಲ್ಲ ಎಂದು ತಿಳಿಸಿದರು. ಅತ್ಯುತ್ತಮವಾದುದ್ದನ್ನೇ ಪ್ರೇಕ್ಷಕರಿಗೆ ನೀಡುವುದಾಗಿ ಭರವಸೆ ನೀಡಿದರು.
ಸಲಾರ್ 2ಗಾಗಿ ತಾವು ಬರೆದಿರುವ ಕಥೆ ಈವರೆಗಿನ ತಮ್ಮ ಅತ್ಯುತ್ತಮ ಕಥೆಗಳಲ್ಲಿ ಒಂದೆಂದರು. ''ನಾನು ಈ ಸಿನಿಮಾಗೆ ನೀಡಿರುವ ಬರವಣಿಗೆ/ಕಥೆ ಬಹುಶಃ ನನ್ನ ಅತ್ಯುತ್ತಮ ಕೃತಿಗಳಲ್ಲಿ ಒಂದಾಗಿದೆ. ನಾನು ಊಹಿಸಿರುವುದಕ್ಕಿಂತಲೂ ಮತ್ತು ಪ್ರೇಕ್ಷಕರು ಊಹಿಸುವುದಕ್ಕಿಂತಲೂ ಹೆಚ್ಚಿನದನ್ನು ಕೊಡುತ್ತಿದ್ದೇನೆ. ಈ ಬಗ್ಗೆ ನಾನು ಬಹಳ ಆತ್ಮವಿಶ್ವಾಸ ಹೊಂದಿದ್ದೇನೆ. ನನ್ನ ಜೀವನದಲ್ಲಿ ಕೆಲವೇ ಕೆಲ ವಿಷಯಗಳ ಬಗ್ಗೆ ನಾನು ವಿಶ್ವಾಸ ಹೊಂದಿದ್ದೇನೆ. ಸಲಾರ್ 2 ನಿಸ್ಸಂದೇಹವಾಗಿ ನನ್ನ ಅತ್ಯುತ್ತಮ ಸಿನಿಮಾಗಳಲ್ಲಿ ಒಂದಾಗಿದೆ'' ಎಂಬ ವಿಶ್ವಾಸ ವ್ಯಕ್ತಪಡಿಸಿದರು.