ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಮುಂದಿನ ಬಹುನಿರೀಕ್ಷಿತ ಪ್ರೊಜೆಕ್ಟ್ 'ಹೀರಾಮಂಡಿ' ಸ್ಟ್ರೀಮಿಂಗ್ ಡೇಟ್ ಅನೌನ್ಸ್ಮೆಂಟ್ ಕಾರ್ಯಕ್ರಮ ಬುಧವಾರ ಮುಂಬೈನಲ್ಲಿ ನಡೆಯಿತು. ಈ ಸೀರಿಸ್ನ ಭಾಗವಾಗಿರುವ ನಟಿ ಅದಿತಿ ರಾವ್ ಹೈದರಿ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ. ಈ ಮಿಸ್ಸಿಂಗ್ಗೆ ಸಿದ್ಧಾರ್ಥ್ ಜೊತೆಗಿನ ಮದುವೆಯೇ ಕಾರಣ ಎಂದು ಈವೆಂಟ್ನ ಹೋಸ್ಟ್ ಬಹಿರಂಗಪಡಿಸಿದರು. ವರದಿಗಳ ಪ್ರಕಾರ, ಪ್ರೇಮಪಕ್ಷಿಗಳು ಬುಧವಾರ ದಾಂಪತ್ಯ ಜೀವನ ಆರಂಭಿಸಿದ್ದಾರೆ. ಆದಾಗ್ಯೂ ಅಧಿಕೃತ ಘೋಷಣೆ ನಿರೀಕ್ಷಿಸಲಾಗಿದೆ.
ಪರಸ್ಪರ ಪ್ರೀತಿಸುತ್ತಿದ್ದ ಅದಿತಿ ರಾವ್ ಹೈದರಿ ಹಾಗೂ ಸಿದ್ಧಾರ್ಥ್ ಸರಳವಾಗಿಯೇ ಹಸೆಮಣೆ ಏರಿದ್ದಾರೆ ಎಂಬ ಸುದ್ದಿ ಬುಧವಾರ ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತು. ಹೀಗಿದ್ದರೂ ಸೆಲೆಬ್ರಿಟಿಗಳಾಗಲಿ ಅಥವಾ ಅವರ ಮ್ಯಾನೇಜರ್ಗಳಾಗಲಿ ಖಚಿತಪಡಿಸಲಿಲ್ಲ. ಮುಂಬೈನಲ್ಲಿ ನಡೆದ ಹೀರಾಮಾಂಡಿ ಕಾರ್ಯಕ್ರಮದಲ್ಲಿ ಇವರ ಮದುವೆ ವಿಚಾರ ಬಹಿರಂಗವಾಗಿದೆ.
'ಹೀರಾಮಂಡಿ' ಸ್ಟ್ರೀಮಿಂಗ್ ಡೇಟ್ ಅನೌನ್ಸ್ಮೆಂಟ್ನಲ್ಲಿ ಹೋಸ್ಟ್ ಸಚಿನ್ ಕುಂಭಾರ್, ನಟಿಯ ಅನುಪಸ್ಥಿತಿಯನ್ನು ಉದ್ದೇಶಿಸಿ ಮಾತನಾಡುವ ವೇಳೆ, ಇಂದು ಅವರು ಮದುವೆಯಾಗಿದ್ದಾರೆಂದು ಹೇಳಿದ್ದು ಅಂತೆಕಂತೆಗಳಿಗೆ ತೆರೆಬಿತ್ತು.
ನೆಟ್ಫ್ಲಿಕ್ಸ್ ಸೀರಿಸ್ 'ಹೀರಾಮಂಡಿ: ದಿ ಡೈಮಂಡ್ ಬಜಾರ್'ನ ರಿಲೀಸ್ ಡೇಟ್ ಅನೌನ್ಸ್ಮೆಂಟ್ ಈವೆಂಟ್ನಲ್ಲಿ ಮಾತನಾಡಿದ ಸಚಿನ್ ಕುಂಭಾರ್, "ಅದಿತಿ ಹೀರಾಮಂಡಿಯ ಪ್ರಮುಖ ಪಾತ್ರಧಾರಿ. ಆದರೆ ಅವರಿಂದು ಈ ಕಾರ್ಯಕ್ರಮದಲ್ಲಿಲ್ಲ. ಅವರು ಮದುವೆ ಆಗಿದ್ದಾರೆ. ಹಾಗಾಗಿ ನಾವು ಅವರಿಗೆ ಇಲ್ಲಿಂದಲೇ ಅಭಿನಂದಿಸುತ್ತಿದ್ದೇವೆ. ಬ್ರಹ್ಮಾಂಡ ಎಲ್ಲವನ್ನೂ ಒಟ್ಟುಗೂಡಿಸುತ್ತಿರುವುದರಿಂದ ಅವರಿಗೆ ವಿಶೇಷ ದಿನವಾಗಿದೆ. ಎಲ್ಲಾ ವಿಶೇಷ ಕಾರ್ಯಕ್ರಮಗಳು ಇಂದು ನಡೆಯುತ್ತಿವೆ" ಎಂದು ತಿಳಿಸಿದರು.