ಹೈದರಾಬಾದ್: ಮಲಯಾಳಂ ಚಿತ್ರರಂಗದೊಳಗಿನ ಕರಾಳ ಮುಖವನ್ನು ಬಹಿರಂಗಪಡಿಸಿರುವ ನ್ಯಾಯಮೂರ್ತಿ ಹೇಮಾ ಸಮಿತಿ ವರದಿಯ ಬಗ್ಗೆ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಶೇರ್ ಮಾಡಿರೋ ಎಕ್ಸ್ ಪೋಸ್ಟ್‌ನಲ್ಲಿ, ವರದಿ ಬಹಿರಂಗಪಡಿಸಿರುವ ಅಂಶಗಳನ್ನು 'ಹೃದಯವಿದ್ರಾವಕ, ಏಕೆಂದರೆ ಇದು ಪರಿಚಿತ ವಿಷಯ' ಎಂದು ತಿಳಿಸಿದ್ದಾರೆ. ಇದು ಚಿತ್ರರಂಗದಲ್ಲಿ ಪ್ರಚಲಿತದಲ್ಲಿರುವ ಪಿತೃಪ್ರಭುತ್ವದ ಶಕ್ತಿ ಮತ್ತು ಶೋಷಣೆಯ ವ್ಯವಸ್ಥೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅಸಮಾಧಾನ ಕೂಡಾ ಹೊರಹಾಕಿದ್ದಾರೆ.
ನಟಿ ಸ್ವರಾ ಭಾಸ್ಕರ್ ಅವರು ಲೈಂಗಿಕ ಕಿರುಕುಳದ ವಿರುದ್ಧ ಮಾತನಾಡುವ ಮಹಿಳೆಯರು ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಉದ್ಯಮದೊಳಗಿನ ಪರಿಸ್ಥಿತಿಗಳ ಸಂಪೂರ್ಣ ತನಿಖೆಗೆ ಒತ್ತಾಯಿಸಿದ್ದಾರೆ. ತಾವು ಎದುರಿಸಿದ ಕಠಿಣ ಪರಿಸ್ಥಿತಿಗಳನ್ನು ಹಂಚಿಕೊಂಡ ಮತ್ತು ಬದಲಾವಣೆಗಾಗಿ ಪ್ರತಿಪಾದಿಸಿದ ನಟಿಮಣಿಯರಿಗೆ ಸಾಥ್ ನೀಡಿದ್ದಾರೆ. ಈ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಇರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಟಿಮಣಿಯರ ನಿರ್ಣಾಯಕ ಪಾತ್ರವನ್ನು (ಹೋರಾಟ) ಒತ್ತಿ ಹೇಳಿದರು.
ತಮ್ಮ ಪೋಸ್ಟ್‌ನಲ್ಲಿ, ಮನರಂಜನಾ ಉದ್ಯಮದ ಪಿತೃಪ್ರಭುತ್ವ ವ್ಯವಸ್ಥೆಯನ್ನು ಟೀಕಿಸಿದರು. ಚಿತ್ರೋದ್ಯಮದ ರಚನೆ ಹೇಗಿದೆ ಎಂದರೆ, ನೈತಿಕತೆಗಿಂತ ಹೆಚ್ಚಾಗಿ ಆರ್ಥಿಕ ಮತ್ತು ಕಾರ್ಯಾಚರಣೆಯ ಅನುಕೂಲದ ವಿಚಾರಗಳಿಗೆ ಆದ್ಯತೆಯಿದೆ. ಇದು ಮೌನಕ್ಕೆ ಕಾರಣವಾಗುತ್ತದೆ ಎಂದ ನಟಿ, ಉದ್ಯಮದಲ್ಲಿನ ಯಶಸ್ವಿ ಜನರು ಹೇಗೆ ರಕ್ಷಿಸಲ್ಪಡುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, ಅಂಥ ವಿಚಾರಗಳಿಗೆ ಸವಾಲು ಹಾಕುವವರನ್ನು ಸಮಸ್ಯೆ ಸೃಷ್ಟಿಸುವವರೆಂದು ಕರೆಯಲಾಗುತ್ತದೆ ಎಂದು ಸಹ ತಿಳಿಸಿದ್ದಾರೆ.
ಭಾರತದ ಇತರ ಚಲನಚಿತ್ರೋದ್ಯಮಗಳು ಕೂಡಾ ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ. ಅಧಿಕಾರದ ದುರುಪಯೋಗದಂತಹ ಸಮಸ್ಯೆಗಳನ್ನು ಪರಿಹರಿಸಲು ಅಹಿತಕರ ಸತ್ಯಗಳನ್ನು ಎದುರಿಸುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ನಟಿಯ ಪೋಸ್ಟ್ ಉದ್ಯಮದಲ್ಲಿನ ಬದಲಾವಣೆಗೆ ಕರೆ ನೀಡಿದೆ.