ಜಬಲ್ಪುರ(ಮಧ್ಯ ಪ್ರದೇಶ): ಸಿನಿಮಾ ನಟಿ ಹಾಗೂ ಮಿಸ್ ವಲ್ಡ್ ಟೂರಿಸಂ ಬ್ಯುಸಿನೆಸ್ ವುಮೆನ್ ಆಫ್ ದಿ ವರ್ಲ್ಡ್ ಪ್ರಶಸ್ತಿ ಗೆದ್ದ ಇಶಿಕಾ ತನೇಜಾ ಐಹಿಕ ಸುಖಭೋಗಗಳನ್ನು ತೊರೆದು ಸಾಧ್ವಿಯಾಗಿದ್ದಾರೆ. ಸಿನಿಮಾ ಹಾಗೂ ಗ್ಲಾಮರಸ್ ಜಗತ್ತಿನಿಂದ ವಿಮುಖರಾಗಿರುವ ಅವರು ಅಲೌಖಿಕ ದಾರಿಯಲ್ಲಿ ಸಾಗುವ ಗಟ್ಟಿ ನಿರ್ಧಾರ ತಳೆದಿದ್ದಾರೆ. ಜಬಲ್ಪುರದ ಶಂಕರಚಾರ್ಯ ಸ್ವಾಮಿ ಸದಾನಂದ ಸರಸ್ವತಿ ಮಹಾರಾಜ್ ಅವರಿಂದ ಇಶಿಕಾ ಸನ್ಯಾಸ ದೀಕ್ಷೆ ಪಡೆದಿದ್ದಾರೆ.
ದೀಕ್ಷೆ ಪಡೆದ ಬಳಿಕ ಮಾತನಾಡಿರುವ ಇಶಿಕಾ, "ಇಂದಿನ ಶಿಕ್ಷಿತ ಯುವಜನತೆ ಧರ್ಮದೊಂದಿಗೆ ಸಂಪರ್ಕ ಬೆಳೆಸಬೇಕು. ನಾನು ಬಾಲ್ಯದಿಂದಲೇ ಧಾರ್ಮಿಕತೆ ಹೊಂದಿದ್ದು ಇದೀಗ ಸಿನಿಮಾ, ಸೌಂದರ್ಯ ಎಲ್ಲವನ್ನೂ ತೊರೆದು ನನ್ನ ಜೀವನವನ್ನೇ ಅದಕ್ಕಾಗಿ ಮುಡುಪಾಗಿಡಲು ಮುಂದಾಗಿದ್ದೇನೆ" ಎಂದರು.
![film-actress-former-miss-world-tourism-ishika-taneja-took-guru-diksha-jabalpur](https://etvbharatimages.akamaized.net/etvbharat/prod-images/08-01-2025/23278816_pkp-1.jpeg)
2017ರಲ್ಲಿ ಮಿಸ್ ವರ್ಲ್ಡ್ ಟೂರಿಸಂ ಆಗಿದ್ದ ಇಶಿಕಾ: ಇಶಿಕಾ ತನೇಜಾ 2017ರಲ್ಲಿ ಮಿಸ್ ವರ್ಲ್ಡ್ ಟೂರಿಸಂ (ಇಂಡಿಯಾ) ಕಿರೀಟ ಮುಡಿಗೇರಿಸಿಕೊಂಡಿದ್ದರು. ಅಷ್ಟೇ ಅಲ್ಲ, ಬ್ಯುಸಿನೆಸ್ ವುಮೆನ್ ಆಫ್ ದಿ ವರ್ಲ್ಡ್ ಪ್ರಶಸ್ತಿಯನ್ನೂ ಪಡೆದಿದ್ದರು. ಭಾರತದ 100 ಮಹಿಳಾ ಸಾಧಕರಲ್ಲಿ ಒಬ್ಬರಾಗಿರುವ ಇವರು ರಾಷ್ಟ್ರಪತಿಗಳಿಂದಲೂ ಪ್ರಶಸ್ತಿ ಪಡೆದಿದ್ದರು.
ಮಂಗಳವಾರ ದೀಕ್ಷೆ ಪಡೆದ ಇಶಿಕಾ ತನೇಜಾ, ಸಂಪೂರ್ಣವಾಗಿ ಸಾದ್ವಿ ದಿರಿಸಿನಲ್ಲಿ ಕಾಣಿಸಿಕೊಂಡರು. ಬಳಿಕ ಜ್ಯೋತಿಷ್ ಪೀಠ ಮತ್ತು ದ್ವಾರಕಾ ಪೀಠದ ಶಂಕರಾಚಾರ್ಯ ಸ್ವಾಮಿ ಸದಾನಂದ ಸರಸ್ವತಿ ಅವರಿಂದ ಆಶೀರ್ವಾದ ಪಡೆದರು.
ಬಾಲ್ಯದಿಂದಲೂ ಧಾರ್ಮಿಕ ವಿಷಯಗಳಲ್ಲಿ ಆಸಕ್ತಿ: "ನಾನು ಬಾಲ್ಯದಿಂದಲೂ ಧಾರ್ಮಿಕತೆಯ ಬಗ್ಗೆ ಆಸಕ್ತಿ ಹೊಂದಿದ್ದೆ. ಶ್ರೀ ರವಿಶಂಕರ್ ಮತ್ತು ಇಸ್ಕಾನ್ನಲ್ಲಿ ಧ್ಯಾನ ಕಲಿತೆ. ಈ ಮೊದಲೇ ಈ ಎಲ್ಲಾ ವಿಷಯಗಳೊಂದಿಗೆ ನಾನು ಸಂಪರ್ಕದಲ್ಲಿದ್ದೆ. ಇದೀಗ ನನ್ನ ಸಂಪೂರ್ಣ ಜೀವನವನ್ನು ಆಧ್ಯಾತ್ಮಿಕತೆಯೊಂದಿಗೆ ಕಳೆಯಲು ನಿರ್ಧರಿಸಿದ್ದೇನೆ. ಇದು ನಾನು ಧಾರ್ಮಿಕತೆಯೊಂದಿಗೆ ಬೆಸೆಯುವ ಸಮಯ. ನನಗೆ ಅನ್ನಿಸಿದ ಮಟ್ಟಿಗೆ ಯುವಜನತೆ ತಮ್ಮ ಶಕ್ತಿ ಮತ್ತು ಸಮಯವನ್ನು ಧಾರ್ಮಿಕತೆಯಲ್ಲಿ ವಿನಿಯೋಗಿಸಬೇಕು ಎಂದು ನನಗನಿಸುತ್ತಿದೆ" ಎಂದರು.
![film-actress-former-miss-world-tourism-ishika-taneja-took-guru-diksha-jabalpur](https://etvbharatimages.akamaized.net/etvbharat/prod-images/08-01-2025/23278816_pkp4.jpeg)
ಜಬಲ್ಪುರದಲ್ಲಿ ಗುರು ದೀಕ್ಷೆ ಪಡೆಯಲು ಕಾರಣ?: "ಶಂಕರಾಚಾರ್ಯರು ಜಬಲ್ಪುರದಲ್ಲಿದ್ದಾರೆ ಎಂದು ತಿಳಿದು ಗುರುದೀಕ್ಷೆ ತೆಗೆದುಕೊಳ್ಳಲು ಬಂದೆ. ಅವರ ಆದೇಶದ ಮೇರೆಗೆ ನಾನು ಜಬಲ್ಪುರಕ್ಕೆ ಆಗಮಿಸಿ ಅವರ ಆಶೀರ್ವಾದ ಪಡೆದು ಗುರು ಮಂತ್ರವನ್ನು ಸ್ವೀಕರಿಸಿದೆ. ಈಗ ಅವರ ಆದೇಶದಂತೆಯೇ ಧರ್ಮ ಮಾರ್ಗದಲ್ಲಿ ಮುನ್ನಡೆಯುತ್ತೇನೆ" ಎಂದು ತಿಳಿಸಿದರು.
ಶಂಕರಾಚಾರ್ಯ ಸದಾನಂದ ಸರಸ್ವತಿ ಮಹಾರಾಜರು ಮಾತನಾಡಿ, "ಆಧ್ಯಾತ್ಮಿಕ ಶಕ್ತಿಗಾಗಿ ಗುರು ದೀಕ್ಷೆ ನೀಡಲಾಗುತ್ತದೆ. ದೀಕ್ಷೆ ತೆಗೆದುಕೊಂಡು ಪೂಜೆ ಮಾಡುವುದರಿಂದ ಶಕ್ತಿ ಸಂಚಯವಾಗುತ್ತದೆ. ಯಾವಾಗ ಜನರಲ್ಲಿ ಆಧ್ಯಾತ್ಮಿಕ ಪ್ರಜ್ಞೆ ಮೂಡುತ್ತದೋ ಆಗ ಅವರು ಗುರುವಿನ ಆಶ್ರಯಕ್ಕೆ ಬರುತ್ತಾರೆ" ಎಂದು ಹೇಳಿದರು.
![film-actress-former-miss-world-tourism-ishika-taneja-took-guru-diksha-jabalpur](https://etvbharatimages.akamaized.net/etvbharat/prod-images/08-01-2025/mp-jab-03-isika-taneja-7211635_07012025230733_0701f_1736271453_230.jpg)
ಮಧುರ್ ಬಂಡಾರ್ಕರ್ ಅವರ 'ಹಿಂದು ಸರ್ಕಾರ್' ಸಿನಿಮಾ ಹಾಗೂ 'ಹದ್' ವೆಬ್ ಸಿರೀಸ್ನಲ್ಲೂ ಇಶಿಕಾ ಕಾರ್ಯನಿರ್ವಹಿಸಿದ್ದರು. ಅಲ್ಲದೇ, ಅನೇಕ ಕ್ರೀಡಾ ಕಾರ್ಯಕ್ರಮಗಳು ಮತ್ತು ಜಾಹೀರಾತಿನಲ್ಲೂ ಮಿಂಚಿದ್ದಾರೆ.
ಇದನ್ನೂ ಓದಿ: ಸಾವಿನ ನಂತರ ಏನಾಗುತ್ತೆ? ಅನ್ನೋದನ್ನು ಹೇಳಲು 'ರಾವುತ' ರೆಡಿ