ಜನವರಿ 8, ರಾಕಿಂಗ್ ಸ್ಟಾರ್ನ ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ವಿಶೇಷ ದಿನ ಅಂತಲೇ ಹೇಳಬಹುದು. ಹೌದು, ಇಂದು ಸ್ವಯಂ ನಿರ್ಮಿತ ನಟ ಖ್ಯಾತಿಯ ಯಶ್ 39ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಮುಂದಿನ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿರುವ ಅತ್ಯಂತ ಜನಪ್ರಿಯ ತಾರೆಗೆ ಕುಟುಂಬ ಸದಸ್ಯರು, ಆಪ್ತರು, ಸಿನಿಸ್ನೇಹಿತರೂ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.
ಸಿನಿಮಾ ಕೆಲಸದ ನಿಮಿತ್ತ ಹೊರಗಿರುವುದಾಗಿ ತಿಳಿಸಿದ್ದ ಯಶ್ ತಮ್ಮವರೊಂದಿಗೆ ಸರಳವಾಗಿ ಜನ್ಮದಿನ ಆಚರಿಸಿಕೊಂಡಿದ್ದಾರೆ. ನಟನ ಪತ್ನಿ, ಮಕ್ಕಳನ್ನು ಈ ಫೋಟೋಗಳಲ್ಲಿ ಕಾಣಬಹುದು. ಯಶ್ ಕುಟುಂಬಕ್ಕೆ ಅಭಿಮಾನಿಗಳು ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.
ಅಭಿಮಾನಿಗಳ ಸುರಕ್ಷತೆ ನಿಟ್ಟಿನಲ್ಲಿ ಪೋಸ್ಟ್ ಶೇರ್ ಮಾಡಿದ್ದ ಯಶ್: ಜನ್ಮದಿನಕ್ಕೂ ಒಂದು ವಾರದ ಮೊದಲು ರಾಕಿಂಗ್ ಸ್ಟಾರ್ ತಮ್ಮ ಅಭಿಮಾನಿಗಳ ಸುರಕ್ಷತೆ ನಿಟ್ಟಿನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಸುರಕ್ಷತೆಯೊಂದಿಗೆ ಅರ್ಥಪೂರ್ಣ ಆಚರಣೆಗೆ ಆದ್ಯತೆ ಕೊಡುವಂತೆ ಮನವಿ ಮಾಡಿದ್ದರು.
''ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ. ನಿಮ್ಮ ಅಭಿಮಾನದ ಅಪ್ಪುಗೆ ಮತ್ತೊಂದು ವರ್ಷವನ್ನು ಸಾರ್ಥಕಗೊಳಿಸಿದೆ. ಹೊಸ ವರ್ಷ ಹೊಸ ಭರವಸೆಗಳೊಂದಿಗೆ ನಗುನಗುತ್ತಾ ಬದುಕೋಣ. ಬದುಕನ್ನು ಮೆರಗುಗೊಳಿಸುವಂತಹ ಹೊಸ ಯೋಜನೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ. ಸಿನಿಮಾ ಕೆಲಸದ ನಿಮಿತ್ತ ನಾನು ಹುಟ್ಟುಹಬ್ಬದಂದು ಊರಿನಲ್ಲಿ ಇರುವುದಿಲ್ಲ. ಬಬ್ಬರ ಹುಟ್ಟುಹಬ್ಬಕ್ಕೆ ನೀವು ತೋರುವ ಅಭಿಮಾನ ಜವಾಬ್ದಾರಿಯುತವಾಗಿರಲಿ ಎಂಬುದು ನನ್ನ ಪ್ರೀತಿಯ ಮನವಿ. ಹಾಗಾಗಿ ಫ್ಲೆಕ್ಸ್, ಬ್ಯಾನರ್‌ಗಳ ಯಾವುದೇ ಆಡಂಬರ ಮಾಡದೇ ನನ್ನ ಮನಸ್ಸಿಗೆ ನೋವಾಗುವ ನಡವಳಿಕೆ ತೋರದೇ ನೀವು ಇದ್ದಲ್ಲಿಂದಲೇ ನಿಮ್ಮ ಕುಟುಂಬದವರು ಹೆಮ್ಮೆ ಪಡುವ ಕೆಲಸ ನಿಮ್ಮಿಂದ ಆದರೆ ಅದಕ್ಕಿಂತ ದೊಡ್ಡ ಜನ್ಮದಿನದ ಉಡುಗೊರೆ ನನಗೆ ಮತ್ತೊಂದಿಲ್ಲ. ಆದಷ್ಟು ಬೇಗ ನಿಮ್ಮನ್ನೆಲ್ಲಾ ಬೇಟಿ ಆಗುತ್ತೇನೆ. ಎಲ್ಲರಿಗೂ ಹೊಸ ವರ್ಷ ಒಳಿತನ್ನು ತರಲಿ. ನಿಮ್ಮ ಪ್ರೀತಿಯ ಯಶ್''.
ಇದನ್ನೂ ಓದಿ: ರಾಕಿಂಗ್ ಸ್ಟಾರ್ ಬರ್ತಡೇ; ಯಶ್ ಜನಪ್ರಿಯತೆಗೆ KGF ಸಾಕ್ಷಿ, 'ಟಾಕ್ಸಿಕ್' ಮೇಲಿದೆ ಬೆಟ್ಟದಷ್ಟು ನಿರೀಕ್ಷೆ
ರಾಕಿಂಗ್ ಸ್ಟಾರ್ ಯಶ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್'. ಇಂದು ನಟನ 39ನೇ ಜನ್ಮದಿನದ ಅಂಗವಾಗಿ ಚಿತ್ರತಂಡ ಸಖತ್ ಇಂಟ್ರೆಸ್ಟಿಂಗ್ ಗ್ಲಿಂಪ್ಸ್ ಅನಾವರಣಗೊಳಿಸಿದೆ. ಟೀಸರ್ ಮೂಲಕ ಮೂಲಕ ನಟನಿಗೆ ಸ್ಪೆಷಲ್ ಆಗಿ ಬರ್ತ್ಡೇ ವಿಶಸ್ ತಿಳಿಸೋ ಜೊತೆಗೆ ಅಭಿಮಾನಿಗಳಿಗೂ ಟ್ರೀಟ್ ಕೊಟ್ಟಂತಾಗಿದೆ. ಗ್ಲಿಂಪ್ಸೇ ಹೀಗಿರಬೇಕಾದ್ರೆ ಸಂಪೂರ್ಣ ಸಿನಿಮಾ ಹೇಗಿರಬಹುದೆಂದು ಅಭಿಮಾನಿಗಳು ಊಹಿಸತೊಡಗಿದ್ದಾರೆ. ಯಶ್ ಮುಖ್ಯಭೂಮಿಕೆಯ ಅಟ್ರ್ಯಾಕ್ಟೀವ್ ಗ್ಲಿಂಪ್ಸ್ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ತಲುಪುವಲ್ಲಿ ಯಶ ಕಂಡಿದೆ. ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಏಪ್ರಿಲ್ 10ಕ್ಕೆ ಸಿನಿಮಾ ಬಿಡುಗಡೆಗೊಳಿಸುವುದಾಗಿ ಚಿತ್ರತಂಡ ಈ ಮೊದಲು ತಿಳಿಸಿತ್ತು.
ಇದನ್ನೂ ಓದಿ: ಗ್ಯಾಂಗ್ಸ್ಟರ್ ಲುಕ್ನಲ್ಲಿ ಯಶ್ ಸ್ಟೈಲಿಶ್ ಎಂಟ್ರಿ; ಸ್ಯಾಂಡಲ್ವುಡ್ನ ಮತ್ತೊಂದು ಬ್ಲಾಕ್ಬಸ್ಟರ್ ರೆಡಿ
2024ರ ಆಗಸ್ಟ್‌ನಲ್ಲಿ ಬಹುನಿರೀಕ್ಷಿತ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಶುಬಾರಂಭ ಮಾಡಿತ್ತು. ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ಜನಪ್ರಿಯತೆ ಸಂಪಾದಿಸಿರುವ ನಟನ ಮುಂದಿನ ಪ್ರಾಜೆಕ್ಟ್ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ಚಿತ್ರ ದೊಡ್ಡ ಮಟ್ಟದಲ್ಲೇ ನಿರ್ಮಾಣಗೊಳ್ಳುತ್ತಿದೆ. ಗೀತು ಮೋಹನ್‌ದಾಸ್ ಚಿತ್ರದ ನಿರ್ದೇಶಕರು.