ISRO SpaDeX Mission: ಹೊಸ ವರ್ಷದಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯ ಅದ್ಭುತಗಳಿಗೆ ಕಾಯುವಿಕೆ ಹೆಚ್ಚಾಗಿದೆ. ಇಸ್ರೋದಿಂದ ಶುಭ ಸುದ್ದಿಗಾಗಿ ದೇಶವಾಸಿಗಳು ಕಾಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಮಹತ್ವಾಕಾಂಕ್ಷೆಯ ಸ್ಪಡೆಕ್ಸ್ ಡಾಕಿಂಗ್ ಮಿಷನ್ ಒಂದು.
ಎರಡು ಉಪಗ್ರಹಗಳನ್ನು ಸಂಪರ್ಕಿಸಲು ಸಂಬಂಧಿಸಿದ ಬಾಹ್ಯಾಕಾಶ ಡಾಕಿಂಗ್ ಪ್ರಯೋಗವನ್ನು ಇಸ್ರೋ ಬುಧವಾರ ಮತ್ತೆ ಮುಂದಕ್ಕೆ ಹಾಕಿದೆ. ಪ್ರಮುಖ ಪ್ರಕ್ರಿಯೆಯಲ್ಲಿನ ಕೆಲವು ದೋಷಗಳಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸ್ಪಡೆಕ್ಸ್ ಎಂಬ ಈ ಪ್ರಯೋಗವು ಜನವರಿ 7ರಂದು ನಡೆಯಬೇಕಿತ್ತು. ಆದರೆ ಜನವರಿ 9ಕ್ಕೆ ಮುಂದೂಡಲಾಗಿತ್ತು. ಈಗ ಮತ್ತೆ ಮುಂದೂಡಿಕೆಯಾಗಿದೆ.
While making a maneuver to reach 225 m between satellites the drift was found to be more than expected, post non-visibility period.
— ISRO (@isro) January 8, 2025
The planned docking for tomorrow is postponed. Satellites are safe.
Stay tuned for updates.#ISRO #SPADEX
ಇಸ್ರೋ 'X' ಪೋಸ್ಟ್ ಮೂಲಕ ಈ ಮಾಹಿತಿ ನೀಡಿದೆ. ಉಪಗ್ರಹಗಳ ನಡುವಿನ 225 ಮೀಟರ್ ದೂರವನ್ನು ತಲುಪುವ ಪ್ರಕ್ರಿಯೆಯಲ್ಲಿ ಕೆಲವು ದೋಷಗಳಿವೆ. ಅದೃಶ್ಯ ಅವಧಿಯ ನಂತರ ನಿರೀಕ್ಷೆಗಿಂತ ಹೆಚ್ಚಿನ ಹರಿವು ಕಂಡುಬಂದಿದೆ. ಆದ್ದರಿಂದ ನಿಗದಿತ ಡಾಕಿಂಗ್ ವಿಧಾನವನ್ನು ಮುಂದೂಡಲಾಗಿದೆ. ಸದ್ಯಕ್ಕೆ ಉಪಗ್ರಹಗಳು ಸುರಕ್ಷಿತವಾಗಿವೆ ಎಂದು ತಿಳಿಸಿದೆ.
ಎರಡು ಸಣ್ಣ ಉಪಗ್ರಹಗಳನ್ನು ಬಳಸಿಕೊಂಡು ಬಾಹ್ಯಾಕಾಶ ನೌಕೆಗಳನ್ನು ಸಂಧಿಸಲು, ಡಾಕಿಂಗ್ ಮತ್ತು ಅನ್‌ಡಾಕ್ ಮಾಡಲು ಅಗತ್ಯವಾದ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಮತ್ತು ಪ್ರದರ್ಶಿಸಲು ವಿನ್ಯಾಸಗೊಳಿಸಲಾದ ಸ್ಪಡೆಕ್ಸ್ ಒಂದು ಐತಿಹಾಸಿಕ ಯೋಜನೆ.
"ಸ್ಪಡೆಕ್ಸ್ ಪ್ರಯೋಗ ಭಾರತದ ಬಾಹ್ಯಾಕಾಶ ಡಾಕಿಂಗ್ ಸಾಮರ್ಥ್ಯಗಳನ್ನು ಮುಂದುವರೆಸುವಲ್ಲಿ ಒಂದು ಮೈಲಿಗಲ್ಲು" ಎಂದು ಇಸ್ರೋ ಹೇಳಿದೆ. ಉಪಗ್ರಹ ಸೇವೆ, ಬಾಹ್ಯಾಕಾಶ ನಿಲ್ದಾಣ ಕಾರ್ಯಾಚರಣೆಗಳು ಮತ್ತು ಅಂತರಗ್ರಹ ಕಾರ್ಯಾಚರಣೆಗಳೂ ಸೇರಿದಂತೆ ಭವಿಷ್ಯದ ಬಾಹ್ಯಾಕಾಶ ಯಾತ್ರೆಗಳಿಗೆ ಡಾಕಿಂಗ್ ಪ್ರಮುಖ ತಂತ್ರಜ್ಞಾನವಾಗಿದೆ.
ಡಿಸೆಂಬರ್ 30ರಂದು ಇಸ್ರೋ, ಡಾಕಿಂಗ್ ಪ್ರಯೋಗ (SPADEX) ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪ್ರಾರಂಭಿಸಿತು. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಮೊದಲ ಉಡಾವಣಾ ಪ್ಯಾಡ್‌ನಿಂದ ಪಿಎಸ್‌ಎಲ್‌ವಿ ಸಿ60 ರಾಕೆಟ್ ಎರಡು ಸಣ್ಣ ಉಪಗ್ರಹಗಳಾದ SDX01 (ಚೇಸರ್) ಮತ್ತು SDX02 (ಟಾರ್ಗೆಟ್) ಮತ್ತು 24 ಪೇಲೋಡ್‌ಗಳನ್ನು ಹೊತ್ತು ನಭಕ್ಕೆ ಚಿಮ್ಮಿತ್ತು. ಉಡಾವಣೆಯಾದ 15 ನಿಮಿಷಗಳ ನಂತರ 220 ಕೆ.ಜಿ ತೂಕದ ಎರಡು ಉಪಗ್ರಹಗಳನ್ನು 475 ಕಿಲೋಮೀಟರ್ ವೃತ್ತಾಕಾರದ ಕಕ್ಷೆಯಲ್ಲಿ ಬಿಡುಗಡೆ ಮಾಡಲಾಯಿತು.
ಡಾಕಿಂಗ್ ಏಕೆ ಮುಖ್ಯ?: ಇಸ್ರೋ ಪ್ರಕಾರ, ಸ್ಪಡೆಕ್ಸ್ ಮಿಷನ್ ಎರಡು ಸಣ್ಣ ಬಾಹ್ಯಾಕಾಶ ನೌಕೆಗಳನ್ನು ಬಳಸಿಕೊಂಡು ಡಾಕಿಂಗ್ ಪ್ರದರ್ಶಿಸಲು ವೆಚ್ಚ-ಪರಿಣಾಮಕಾರಿ ತಂತ್ರಜ್ಞಾನದ ಪ್ರದರ್ಶನ. ಈ ತಂತ್ರಜ್ಞಾನವು ಭಾರತದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳಾದ ಚಂದ್ರನ ಮೇಲೆ ಇಳಿಯುವುದು, ಚಂದ್ರನಿಂದ ಮಾದರಿ ವಾಪಸಾತಿ, ಭಾರತೀಯ ಬಾಹ್ಯಾಕಾಶ ನಿಲ್ದಾಣ (BAS) ನಿರ್ಮಾಣ ಮತ್ತು ಕಾರ್ಯಾಚರಣೆ ಇತ್ಯಾದಿಗಳಿಗೆ ಅತ್ಯಗತ್ಯ. ಸಾಮಾನ್ಯ ಮಿಷನ್ ಉದ್ದೇಶಗಳನ್ನು ಸಾಧಿಸಲು ಬಹು ರಾಕೆಟ್ ಉಡಾವಣೆಗಳನ್ನು ನಿರ್ವಹಿಸಬೇಕಾದಾಗ ಬಾಹ್ಯಾಕಾಶದಲ್ಲಿ ಡಾಕಿಂಗ್ ತಂತ್ರಜ್ಞಾನವು ಅಗತ್ಯವಾಗಿರುತ್ತದೆ. ಈ ಕಾರ್ಯಾಚರಣೆಯ ಮೂಲಕ, ಭಾರತ ಬಾಹ್ಯಾಕಾಶ ಡಾಕಿಂಗ್ ತಂತ್ರಜ್ಞಾನವನ್ನು ಹೊಂದಿರುವ ವಿಶ್ವದ ನಾಲ್ಕನೇ ರಾಷ್ಟ್ರವಾಗುತ್ತದೆ.
ಇದನ್ನು ಓದಿ: ಬಾಹ್ಯಾಕಾಶ ಡಾಕಿಂಗ್ ಪ್ರಯೋಗ: ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿ, ಯಶಸ್ವಿಯಾಗಿ ಬೇರ್ಪಡಿಸಿದ ಇಸ್ರೋ - ISRO SPACE DOCKING
ಇದನ್ನೂ ಓದಿ: ಸ್ಪಡೆಕ್ಸ್ ಮಿಷನ್: ಇಂದು ನಡೆಯಬೇಕಾಗಿದ್ದ ಡಾಕಿಂಗ್ ಪ್ರಕ್ರಿಯೆ ಮುಂದೂಡಿದ ಇಸ್ರೋ