ರಿಯಾಲಿಟಿ ಶೋ ಮೂಲಕ ಜನಮನ ಸೆಳೆದಿದ್ದ ಸುನಾಮಿ ಕಿಟ್ಟಿ ಅಭಿನಯದ 'ಕೋರ' ಚಿತ್ರದ ಟ್ರೇಲರ್ ಅನಾವರಣಗೊಂಡಿದೆ. ಬರುವ ತಿಂಗಳು ಫೆಬ್ರವರಿ 7ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆ ಕಾಣುತ್ತಿರುವ ಚಿತ್ರದ ಕನ್ನಡ ಟ್ರೇಲರ್ ಅನ್ನು ಮಹರ್ಷಿ ಆನಂದ್ ಗುರೂಜಿ ಹಾಗೂ ಪಾಲನಹಳ್ಳಿ ಗುರೂಜಿ ಅವರು ಬಿಡುಗಡೆ ಮಾಡಿ ಸಿನಿಮಾಗೆ ಶುಭ ಹಾರೈಸಿದರು. ತಮಿಳು ಟ್ರೇಲರ್ ನಿರ್ದೇಶಕರಾದ ಆರ್.ಚಂದ್ರು ಹಾಗೂ ಬಹದ್ದೂರ್ ಚೇತನ್ ಕುಮಾರ್ ಅವರಿಂದ ಅನಾವರಣಗೊಂಡಿದೆ. ಈವೆಂಟ್‌ನಲ್ಲಿ ಚಿತ್ರತಂಡ ತಮ್ಮ ಅನಿಸಿಕೆ ಹಂಚಿಕೊಂಡಿತು.
ನಿರ್ಮಾಪಕ ಪಿ.ಮೂರ್ತಿ ಮಾತನಾಡಿ, ಕೊರಗಜ್ಜನ ಆಶೀರ್ವಾದದಿಂದ ಆರಂಭವಾದ ಚಿತ್ರ ಕೋರ. ನಮ್ಮ ನೆಲದ ಕಥೆ. ಆದಿವಾಸಿ ಬುಡಕಟ್ಟು ಜನಾಂಗ ಹಾಗೂ ರಾಕ್ಷಸನೊಬ್ಬನ ಕುರಿತಾದ ಕಥೆಯೂ ಕೂಡಾ ಹೌದು. ಹೆಚ್ಚಿನ ಭಾಗದ ಚಿತ್ರೀಕರಣ ಕಾಡಿನಲ್ಲೇ ನಡೆದಿದೆ. ಸಕಲೇಶಪುರ, ಶೃಂಗೇರಿ, ಉಡುಪಿ, ಮಂಗಳೂರು ಸೇರಿ ಮೊದಲಾದ ಕಡೆಗಳಲ್ಲಿ ಶೂಟ್ ಮಾಡಲಾಗಿದೆ. ನಿರ್ದೇಶಕ ಒರಟ ಶ್ರೀ ಅವರು ಒಂದೊಳ್ಳೆ ಕಥೆ ಮಾಡಿದ್ದಾರೆ. ಸುನಾಮಿ ಕಿಟ್ಟಿ ಉತ್ತಮವಾಗಿ ನಟಿಸಿದ್ದಾರೆ. ನಾನು ಕೂಡಾ ಕಠೋರ ಎಂಬ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ ಉತ್ತಮವಾಗಿ ಮೂಡಿಬಂದಿರುವ ಈ ಚಿತ್ರ ಫೆಬ್ರವರಿ 7ರಂದು ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ಬಿಡುಗಡೆಯಾಗಲಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ಕೇಳಿಕೊಂಡರು.
ನಿರ್ದೇಶಕ ಒರಟ ಶ್ರೀ ಮಾತನಾಡಿ, ನಿರ್ದೇಶನಕ್ಕೆ ಅವಕಾಶ ಮಾಡಿಕೊಟ್ಟ ನಿರ್ಮಾಪಕರಿಗೆ, ತಂದೆ ತಾಯಿಗೆ ಹಾಗೂ ಚಿತ್ರಕ್ಕೆ ಸಹಕಾರ ನೀಡಿದ ಇಡೀ ತಂಡಕ್ಕೆ ಧನ್ಯವಾದ ತಿಳಿಸಿದರು. ಕೋರ 40 ವರ್ಷಗಳ ಹಿಂದಿನ ಕಥೆ. ಆ ಕಾಲದಲ್ಲಿ ಪ್ರಕೃತಿಯನ್ನು ದೇವರಂತೆ ಆರಾಧಿಸುತ್ತಿದ್ದರು. ಆದ್ರೀಗ ಒಂದಡಿ ಜಾಗಕ್ಕೂ ಹೊಡೆದಾಟ. ಈ ರೀತಿಯ ವಿಭಿನ್ನ ಕಂಟೆಂಟ್ ಹೊಂದಿರುವ ಕಮರ್ಷಿಯಲ್ ಚಿತ್ರವಿದು. ಪ್ಯಾನ್ ಇಂಡಿಯಾ ಚಿತ್ರ ಅಂತಾ ಮಾಡಿಲ್ಲ. ಕನ್ನಡ ಚತ್ರವಿದು. ಈ ಚಿತ್ರ ನೋಡಿದ ಕೆಲವರು ಇದು ಎಲ್ಲಾ ಭಾಷೆಗಳಿಗೂ ಹೊಂದುವ ಕಥೆ. ಹಾಗಾಗಿ ಎಲ್ಲಾ ಭಾಷೆಗಳಲ್ಲೂ ಬಿಡುಗಡೆ ಮಾಡಿ ಎಂದು ಸಲಹೆ ಕೊಟ್ಟರು ಎಂದರು.
ನಾಯಕ ನಟ ಸುನಾಮಿ ಕಿಟ್ಟಿ ಮಾತನಾಡಿ, ನನ್ನನ್ನು ನಾಯಕನನ್ನಾಗಿ ಮಾಡಿದ ಪಿ.ಮೂರ್ತಿ ಅವರಿಗೆ ಹಾಗೂ ನನಗೆ ಅಭಿನಯ ಹೇಳಿಕೊಟ್ಟು ಚಿತ್ರದಲ್ಲಿ ನಟಿಸಲು ಸಿದ್ದತೆ ಮಾಡಿಸಿದ ನಿರ್ದೇಶಕರಿಗೆ ಧನ್ಯವಾದಗಳು. ನಮ್ಮ ತಂಡದ ಶ್ರಮದಿಂದ ಕೋರ ಒಂದೊಳ್ಳೆ ಚಿತ್ರವಾಗಿ ನಿಮ್ಮ ಮುಂದೆ ಬರುತ್ತಿದೆ. ಸಿನಿಮಾ ನೋಡಿ ಹಾರೈಸಿ ಎಂದು ನಾಯಕ ಸುನಾಮಿ ಕಿಟ್ಟಿ ತಿಳಿಸಿದರು.
ಇದನ್ನೂ ಓದಿ: ಗ್ಯಾಂಗ್ಸ್ಟರ್ ಲುಕ್ನಲ್ಲಿ ಯಶ್ ಸ್ಟೈಲಿಶ್ ಎಂಟ್ರಿ; ಸ್ಯಾಂಡಲ್ವುಡ್ನ ಮತ್ತೊಂದು ಬ್ಲಾಕ್ಬಸ್ಟರ್ ರೆಡಿ
ಸಹ ನಿರ್ಮಾಪಕ ಚೆಲುವರಾಜು, ನಾಯಕಿ ಚರಿಷ್ಮಾ, ನಟರಾದ ಎಂ.ಕೆ.ಮಠ, ಮುನಿ, ನೀನಾಸಂ ಅಶ್ವಥ್, ಯತಿರಾಜ್, ನಟಿ ಸೌಜನ್ಯ, ಸಂಗೀತ ನಿರ್ದೇಶಕ ಹೇಮಂತ್ ಕುಮಾರ್, ಛಾಯಾಗ್ರಾಹಕ ಸೆಲ್ವಂ, ಸಾಹಿತಿ ರೇವಣ್ಣ ನಾಯಕ್, ಸಂಕಲನಕಾರ ಕೆ.ಗಿರೀಶ್ ಕುಮಾರ್ ಹಾಗೂ ತಮಿಳು ವಿತರಕರಾದ ಶಾನ್ ಹಾಗೂ ತೆಲುಗು ವಿತರಕ ಬಾಲಾಜಿ ಈ ಚಿತ್ರದ ಕುರಿತು ತಮ್ಮ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ಮುಗ್ಗರಿಸಿದ್ರೂ ಆಸ್ಕರ್ಗೆ ಎಂಟ್ರಿ; ಇದು ಸೂರ್ಯ ನಟನೆಯ 'ಕಂಗುವ' ಸಾಧನೆ
ರತ್ನಮ್ಮ ಮೂವೀಸ್ ಲಾಂಛನದಲ್ಲಿ ಪಿ.ಮೂರ್ತಿ ನಿರ್ಮಿಸಿರುವ ಸಿನಿಮಾ ಫೆ.7ಕ್ಕೆ ತೆರೆಕಾಣಲಿದೆ. ಈವೆಂಟ್‌ನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ಅಧ್ಯಕ್ಷ ಉಮೇಶ್ ಬಣಕಾರ್, ನಟ ಕಾಕ್ರೋಜ್ ಸುಧೀ, ಒರಟ ಪ್ರಶಾಂತ್, ನಿರ್ಮಾಪಕ ಸಂಜಯ್ ಗೌಡ, ತುಕಾಲಿ ಸಂತೋಷ್ ಸೇರಿದಂತೆ ಸಾಕಷ್ಟು ಗಣ್ಯರು ಉಪಸ್ಥಿತರಿದ್ದರು.