ಬೆಂಗಳೂರು: ಮಧ್ಯಮ ಮತ್ತು ಕೆಳಮಧ್ಯಮ ವರ್ಗದವರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ಸರಕಾರಿ ನೌಕರರನ್ನು ಗಮನದಲ್ಲಿಟ್ಟುಕೊಂಡು ಸರಕಾರಿ ಸ್ವಾಮ್ಯದ ಎಂಎಸ್‌ಐಎಲ್ ಇದೀಗ ಆಕರ್ಷಕ ಟೂರ್ ಪ್ಯಾಕೇಜ್ ನೀಡಲು ಮುಂದಾಗಿದೆ. ಸಂಸ್ಥೆ ರೂಪಿಸಿರುವ ನಾನಾ ತರಹದ ಆಕರ್ಷಕ ಟೂರ್ ಪ್ಯಾಕೇಜುಗಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಇಂದು ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಅವರು ಸಂಸ್ಥೆಯ ಡೈರಿ, ಕ್ಯಾಲೆಂಡರ್ ಮತ್ತು ಬಾಂಡ್ ಜೆರಾಕ್ಸ್ ಪೇಪರ್ ಕೂಡ ಬಿಡುಗಡೆ ಮಾಡಿದರು.
ಆಫ್ಲೈನ್ ಪ್ರವಾಸಿಗರಿಗೆ ಆದ್ಯತೆ: ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್ ಅವರು, ಎಂಎಸ್‌ಐಎಲ್ ಮೊದಲಿನಿಂದಲೂ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಗೆ ಹೆಸರಾಗಿದೆ. ಈಗ ಟೂರ್ ಪ್ಯಾಕೇಜುಗಳ ಮೂಲಕ ಸಂಸ್ಥೆಯು ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಈ ಪ್ಯಾಕೇಜುಗಳ ಅಡಿಯಲ್ಲಿ ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಆದಿಕೈಲಾಸ ಮತ್ತು ವಾರಣಾಸಿಗೆ ಪ್ರವಾಸ ಆಯೋಜಿಸಲಾಗುವುದು. ಮುಖ್ಯವಾಗಿ ನಾವು ಆಫ್-ಲೈನ್ ಪ್ರವಾಸಿಗರಿಗೆ ಆದ್ಯತೆ ಕೊಡುತ್ತಿದ್ದೇವೆ ಎಂದರು.
ಈ ಪ್ಯಾಕೇಜುಗಳಲ್ಲಿ ಸುರಕ್ಷತೆ, ಶುಚಿರುಚಿಯಾದ ಆಹಾರ, ಮನೆ ಬಾಗಿಲಿನಿಂದಲೇ ಕರೆದುಕೊಂಡು ಹೋಗಿ ವಾಪಸ್ ಅಲ್ಲಿಗೇ ಬಿಡುವುದು, ಸಹಾಯಕರ ನೆರವು, ಮಾಸಿಕ ಕಂತುಗಳಲ್ಲಿ ಹಣ ಪಾವತಿ, ಲಕ್ಕಿ ಡ್ರಾ, ಕೈಗೆಟುಕುವ ವೆಚ್ಚದಲ್ಲಿ ಉತ್ತರ ಭಾರತ ಪ್ರವಾಸ ಮುಂತಾದ ಸೌಲಭ್ಯ ಮತ್ತು ಆಕರ್ಷಣೆಗಳಿವೆ. ಗುಂಪು ಪ್ರವಾಸ ಮಾಡಲು ಬಯಸುವವರಿಗೆ ಪ್ರತಿ ಬ್ಯಾಚಿನಲ್ಲಿ ಗರಿಷ್ಠ 100 ಮಂದಿಗೆ ಅವಕಾಶ ಇರಲಿದೆ ಎಂದು ಅವರು ಮಾಹಿತಿ ನೀಡಿದರು.
ಎಲ್ಲಾ ವರ್ಗದವರಿಗೂ ಅನುಕೂಲಕರ ಪ್ರವಾಸ: ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆಂದು ʻಸ್ಟಡಿ-ಕಂ-ಪ್ಲೆಷರ್ ಟೂರ್, ಇಕೋ ಟೂರಿಸಂ ಮತ್ತು ಕರಾವಳಿ ಪ್ರದೇಶಗಳ ವೀಕ್ಷಣೆ ಇರುವ ಕೋಸ್ಟಲ್ ಟೂರಿಸಂ ಮುಂತಾದ ಪ್ಯಾಕೇಜುಗಳನ್ನು ರೂಪಿಸಲು ಚಿಂತಿಸುತ್ತಿದೆ. ಸಂಸ್ಥೆಯು ಸದ್ಯಕ್ಕೆ ರೂಪಿಸಿರುವ ಪ್ಯಾಕೇಜಿನಲ್ಲಿ ಕೇವಲ 20 ಸಾವಿರ ರೂ. ವೆಚ್ಚದಲ್ಲಿ 15ರಿಂದ 18 ದಿನಗಳ ಉತ್ತರ ಭಾರತ ಪ್ರವಾಸ ಮಾಡಿಕೊಂಡು ಬರಬಹುದು.
ಸರಕಾರಿ ಉದ್ಯೋಗಿಗಳನ್ನು ಗಮನದಲ್ಲಿ ಇಟ್ಟುಕೊಂಡು ಮಾಡಿರುವ ಪ್ಯಾಕೇಜಿನಲ್ಲಿ ಮೊದಲು ಶೇ.50ರಷ್ಟು ಹಣ ಪಾವತಿಸಿ, ಪ್ರವಾಸ ಕೈಗೊಳ್ಳಬಹುದು. ಪ್ರವಾಸ ಮುಗಿಸಿಕೊಂಡು ಬಂದ ಬಳಿಕ ಉಳಿದ ಶೇ.50ರಷ್ಟು ಹಣವನ್ನು ಮಾಸಿಕ ಕಂತುಗಳಲ್ಲಿ ಕಟ್ಟಬಹುದು. ಹಾಗೆಯೇ ಲಕ್ಕಿ ಡ್ರಾದಲ್ಲಿ ವಿಜೇತರಾಗುವ ಅದೃಷ್ಟಶಾಲಿಗಳು ಡ್ರಾ ನಂತರದ ಹಣವನ್ನು ಪಾವತಿಸಬೇಕಾಗಿಲ್ಲ. ಈ ಎಲ್ಲ ಪ್ಯಾಕೇಜುಗಳಲ್ಲೂ ಎಂಎಸ್ ಐಎಲ್ ವತಿಯಿಂದ ಟೂರ್ ಮ್ಯಾನೇಜರ್ ಅಥವಾ ಸಹಾಯಕರೊಬ್ಬರು ಜತೆಗಿರಲಿದ್ದು, ಪ್ರವಾಸಿಗರ ಬೇಕು-ಬೇಡಗಳನ್ನು ಆಲಿಸಿ, ನೆರವು ನೀಡಲಿದ್ದಾರೆ.
ಪ್ರವಾಸಿಗರಿಗೆ ಆದಷ್ಟು ಕಡಿಮೆ ವೆಚ್ಚದಲ್ಲಿ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ಸಾಧ್ಯವಾಗಬೇಕು ಎನ್ನುವ ಆಶಯದೊಂದಿಗೆ ಎಂಎಸ್ ಐಎಲ್ ಮೂಲಕ ಈ ಹೆಜ್ಜೆ ಇಡಲಾಗುತ್ತಿದೆ. ಖಾಸಗಿ ಸಂಸ್ಥೆಗಳ ದರಕ್ಕೆ ಹೋಲಿಸಿದರೆ ನಾವು ನಿಗದಿ ಪಡಿಸಿರುವ ದರ ತುಂಬಾ ಕಡಿಮೆ ಇದೆ. ಹಾಗೆಯೇ ಪ್ರತಿಯೊಂದು ಸೇವೆಯನ್ನೂ ಗುಣಮಟ್ಟದೊಂದಿಗೆ ಒದಗಿಸಲಾಗುತ್ತಿದೆ.
ಎಲ್ಲೆಲ್ಲಿಗೆ ಪ್ರವಾಸ ಪ್ಯಾಕೇಜು? ಕಾಶಿ, ಅಯೋಧ್ಯೆ, ಪುರಿ, ಆದಿ ಕೈಲಾಸ ಮುಂತಾದ ಧಾರ್ಮಿಕ ಮತ್ತು ಐತಿಹಾಸಿಕ ತಾಣಗಳಿಗೆ ಪ್ರವಾಸಿಗರನ್ನು ಅದು ಕರೆದೊಯ್ಯಲಿದೆ. ಜೊತೆಗೆ ದುಬೈ, ಸಿಂಗಪುರ್, ವಿಯಟ್ನಾಂ, ಶ್ರೀಲಂಕಾ, ನೇಪಾಳ, ಥಾಯ್ಲೆಂಡ್ ಮತ್ತು ಯೂರೋಪಿನ ಹಲವು ದೇಶಗಳಿಗೂ ಎಂಎಸ್ ಐಎಲ್ ಟೂರ್ ಪ್ಯಾಕೇಜುಗಳನ್ನು ರೂಪಿಸಿದೆ. ಈ ಪ್ರವಾಸಗಳಿಗೆ ಈಗಾಗಲೇ ದಿನಾಂಕ ನಿಗದಿಯಾಗಿದ್ದು, ಸಾರ್ವಜನಿಕರು ಮಾಹಿತಿ ಪಡೆದುಕೊಳ್ಳಬಹುದು.
24/7 ಸಹಾಯವಾಣಿ ಸೌಲಭ್ಯ : ಪ್ರವಾಸಿಗರ ಅನುಕೂಲಕ್ಕೆ ಎಂಎಸ್ ಐಎಲ್ 24/7 ಸಹಾಯವಾಣಿ ಮತ್ತು ವಾಟ್ಸ್ಯಾಪ್ ಸೌಲಭ್ಯವನ್ನೂ (080-45888882, 9353645921) ಹೊಂದಿದೆ. ಇದರ ನಿರ್ವಹಣೆಗಾಗಿ ಪ್ರತ್ಯೇಕ ತಂಡವೇ ಇರಲಿದೆ. ಒಂದು ನಂಬರಿನಲ್ಲಿ ಯಾರಾದರೂ ಮಾತನಾಡುತ್ತಿದ್ದರೆ, ಅದು ತಾನಾಗಿಯೇ ಮತ್ತೊಂದು ಸಂಖ್ಯೆಗೆ ಸಂಪರ್ಕ ಕಲ್ಪಿಸುವ ಕ್ಲೌಡ್ ಬೇಸ್ಡ್ ಟೆಲಿಕಾಂ ಸಿಸ್ಟಮ್ ಅನ್ನು ಅಳವಡಿಸಿಕೊಳ್ಳಲಾಗಿದೆ.
ಎಂಎಸ್ಐಎಲ್ ಚಿಟ್ ಫಂಡ್ ಬಲವರ್ಧನೆ : ಎಂಎಸ್ಐಎಲ್, ಮೈಸೂರು ಪೇಂಟ್ಸ್ ಮತ್ತು ವಾರ್ನಿಶ್, ಎನ್.ಜಿ.ಇ.ಎಫ್ ಮುಂತಾದವುಗಳನ್ನು ಲಾಭದಾಯಕವನ್ನಾಗಿ ಸರ್ಕಾರ ಮಾಡುತ್ತಿದೆ. ಎಂಎಸ್ಐಎಲ್ ಸದ್ಯಕ್ಕೆ ವಾರ್ಷಿಕ 250 ಕೋಟಿ ರೂ.ಗಳ ಚಿಟ್ ಫಂಡ್ ನಡೆಸುತ್ತಿದ್ದು, ಮುಂದಿನ 5 ವರ್ಷಗಳಲ್ಲಿ ವರ್ಷಕ್ಕೆ 5,000 ಕೋಟಿ ರೂ. ಮಟ್ಟಕ್ಕೆ ಕೊಂಡೊಯ್ಯುವ ಯೋಜನೆ ರೂಪಿಸಲಾಗಿದೆ. ಇದಕ್ಕೆ ಸದ್ಯದಲ್ಲೇ ಸಿಎಂರಿಂದ ಚಾಲನೆ ಸಿಗಲಿದೆ. ಹಾಗೆಯೇ, ಸಂಸ್ಥೆಯ 200 ಮದ್ಯದ ಅಂಗಡಿಗಳನ್ನು ಮೇಲ್ದರ್ಜೆಗೆ ಏರಿಸುವ ಯೋಜನೆಯಡಿ 63 ಮಳಿಗೆಗಳ ಕೆಲಸ ಮುಗಿದಿದ್ದು, ಇಲ್ಲೆಲ್ಲ ವಹಿವಾಟು ಮೂರು ಪಟ್ಟು ಹೆಚ್ಚಾಗಿದೆ. ಮೈಸೂರು ಪೇಂಟ್ಸ್ ಮತ್ತು ವಾರ್ನಿಶ್ ಮೂಲಕ ಗೃಹ ಬಳಕೆಯ ಪೇಂಟ್ ತಯಾರಿಕೆಗೂ ಗಮನ ಹರಿಸಲಾಗಿದೆ. ಹುಬ್ಬಳ್ಳಿ ಎನ್ಜಿಇಎಫ್ ದೆಹಲಿಯ ನೂತನ ಸಂಸತ್ ಭವನ ಮತ್ತು ರೈಲ್ವೆ ಇಲಾಖೆಗೆ ತನ್ನ ಟ್ರಾನ್ಸ್ -ಫಾರ್ಮರುಗಳನ್ನು ಪೂರೈಸುತ್ತಿದೆ. ಬಿಇಚ್ಇಎಲ್ ಜತೆ ಒಪ್ಪಂದ ಮಾಡಿಕೊಂಡು ಅದನ್ನು ಪುನರುಜ್ಜೀವನಗೊಳಿಸುವ ಉದ್ದೇಶ ಇದೆ ಎಂದು ಸಚಿವರು ವಿವರಿಸಿದರು.
ಇದನ್ನೂ ಓದಿ: ತಾಯಂದಿರ ಮರಣ ತಡೆಗಟ್ಟಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಿ: ಅಧಿಕಾರಿಗಳಿಗೆ ಸಿಎಂ ಸೂಚನೆ