ಸ್ಯಾಂಡಲ್ವುಡ್ ರಾಕಿಂಗ್ ಸ್ಟಾರ್ ಯಶ್ ಇಂದು 39ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಇಂಡಿಯನ್ ಕೆಜಿಎಫ್ ಸ್ಟಾರ್ಗೆ ಕುಟುಂಬಸ್ಥರು, ಆಪ್ತರು, ಸಿನಿಸ್ನೇಹಿತರೂ ಸೇರಿದಂತೆ ಅವರ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ. ಯಶ್ ಮುಖ್ಯಭೂಮಿಕೆಯ ಮುಂದಿನ ಚಿತ್ರ ಟಾಕ್ಸಿಕ್ ಕಡೆಯಿಂದ ಸಿನಿಪ್ರಿಯರಿಗೆ ಬರ್ತ್ಡೇ ಟ್ರೀಟ್ ಸಿಕ್ಕಿದೆ.
ಹೌದು, ರಾಕಿಂಗ್ ಸ್ಟಾರ್ನ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್'ನ ತಂಡ ಆಕರ್ಷಕ ಗ್ಲಿಂಪ್ಸ್ ಅನಾವರಣಗೊಳಿಸುವ ಮೂಲಕ ನಟನಿಗೆ ವಿಶೇಷವಾಗಿ ಜನ್ಮದಿನದ ಶುಭಾಶಯ ಕೋರಿದ್ದಾರೆ.
ಈ ಕುತೂಹಲಕಾರಿ ಪ್ರಾಜೆಕ್ಟ್ನ ಅಪ್ಡೇಟ್ಗಾಗಿ ಅಭಿಮಾನಿಗಳು ಬಹಳ ಕಾತುರರಾಗಿದ್ದರು. ಅದರಂತೆ ಪೋಸ್ಟರ್ ಮೂಲಕ ಅಭಿಮಾನಿಗಳ ಕುತೂಹಲವನ್ನು ಚಿತ್ರತಂಡ ಹೆಚ್ಚಿಸಿತ್ತು. ಈವರೆಗೆ ತಮ್ಮ ಬಿಗ್ ಪ್ರಾಜೆಕ್ಟ್ ಬಗ್ಗೆ ಹೆಚ್ಚೇನೂ ಬಿಟ್ಟುಕೊಡದ ತಂಡ ಇಂದು ಸಖತ್ ಇಂಟ್ರೆಸ್ಟಿಂಗ್ ಆಗಿರುವ ಟೀಸರ್ ರಿಲೀಸ್ ಮಾಡಿದೆ. ಗ್ಯಾಂಗ್ಸ್ಟರ್ ಲುಕ್‌ನಲ್ಲಿ ಯಶ್ ಸ್ಟೈಲಿಶ್ ಎಂಟ್ರಿ ಕೊಟ್ಟಿದ್ದು, ವೈಲ್ಡ್ ರೊಮ್ಯಾನ್ಸ್ ಮಾಡಿದ್ದಾರೆ.
ಈ ಮೊದಲೇ ತಿಳಿಸಿದಂತೆ ಯಶ್ ಅವರ ಈ ವಿಶೇಷ ದಿನದಂದು ಬೆಳಗ್ಗೆ 10:25ಕ್ಕೆ ಗ್ಲಿಂಪ್ಸ್ ಅನಾವರಣಗೊಳಿಸಲಾಗಿದೆ. ಕೊನೆಗೂ ಸಿನಿ ಜಗತ್ತು ನಿರೀಕ್ಷಿಸಿದ ಅಪ್ಡೇಟ್ನ ಒಂದು ನೋಟ ಸಿಕ್ಕಿದೆ. ಕೊಟ್ಟ ಭರವಸೆಯಂತೆ, ನಾಯಕ ನಟ ಸೇರಿ ಕೆವಿಎನ್ ಪ್ರೊಡಕ್ಷನ್ಸ್‌ನ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಟಾಕ್ಸಿಕ್ ಗ್ಲಿಂಪ್ಸ್ ಶೇರ್ ಆಗಿದೆ.
59 ಸೆಕೆಂಡ್‌ಗಳ ಸ್ಟೈಲಿಶ್ ಟೀಸರ್, ಸ್ವ್ಯಾಗ್ ಆ್ಯಂಡ್ ಗ್ಲ್ಯಾಮರ್‌ನಿಂದ ತುಂಬಿದೆ. ಗ್ಯಾಂಗ್ಸ್ಟರ್ ಲುಕ್‌ನಲ್ಲಿ ಯಶ್ ವಿಂಟೇಜ್ ಕಾರಿನಲ್ಲಿ ಆಗಮಿಸುವ ದೃಶ್ಯದೊಂದಿಗೆ ಗ್ಲಿಂಪ್ಸ್ ಶುರುವಾಗಿದೆ. ಸ್ವಾಂಕಿ ಕ್ಲಬ್‌ನ ಔಟ್ಸೈಡ್ ಶಾಟ್‌ನೊಂದಿಗೆ ವಿಡಿಯೋ ಪ್ರಾರಂಭವಾಗಿದ್ದು, ನೋಡುಗರ ಕುತೂಹಲ ಹೆಚ್ಚಿಸಿದೆ.
ಕಂಪ್ಲೀಟ್ ಬಿಯರ್ಡ್, ದಟ್ಟ ನೋಟ ಅವರ ಪವರ್ಫುಲ್ ಪಾತ್ರದ ಒಂದು ಸುಳಿವು ಬಿಟ್ಟುಕೊಟ್ಟಿದೆ. ಟೀಸರ್ ಕಥಾಹಂದರ ಅಥವಾ ಯಶ್ ಪಾತ್ರದ ಬಗ್ಗೆ ಹೆಚ್ಚೇನು ಬಿಟ್ಟುಕೊಟ್ಟಿಲ್ಲವಾದ್ರೂ, ಇದೊಂದು ಮಾಫಿಯಾ ಕುರಿತಾದ ಸಿನಿಮಾ ಅನ್ನೋದು ಬಹುತೇಕ ಪಕ್ಕಾ. ಒಂದೇ ಒಂದು ಡೈಲಾಗ್ ಇಲ್ಲದಿದ್ರೂ ಎಲೆಕ್ಟ್ರಿಫೈಯಿಂಗ್ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಸೀನ್ನ ಇಂಟೆನ್ಸಿಟಿಯನ್ನು ಒತ್ತಿಹೇಳಿದೆ.
ಇದನ್ನೂ ಓದಿ: ರಾಕಿಂಗ್ ಸ್ಟಾರ್ ಬರ್ತಡೇ; ಯಶ್ ಜನಪ್ರಿಯತೆಗೆ KGF ಸಾಕ್ಷಿ, 'ಟಾಕ್ಸಿಕ್' ಮೇಲಿದೆ ಬೆಟ್ಟದಷ್ಟು ನಿರೀಕ್ಷೆ
ಇದಕ್ಕೂ ಮುನ್ನ, ಟಾಕ್ಸಿಕ್‌ನಿಂದ ಇಂಟ್ರೆಸ್ಟಿಂಗ್ ಪೋಸ್ಟರ್ ಅನಾವರಣಗೊಳಿಸಲಾಗಿತ್ತು. ಯಶ್ ಹಿಂಬದಿಯ ನೋಟ, ಕಥಾಹಂದರ ಮಿಸ್ಟ್ರಿ ಆಗಿದೆ ಎಂಬುದನ್ನು ತಿಳಿಸಿತ್ತು. ಸೂಟು ಬೂಟು, ಕ್ಯಾಪ್ ಧರಿಸಿ, ವಿಂಟೇಜ್ ಕಾರಿಗೆ ಒರಗಿಕೊಂಡು ಸಿಗರೇಟ್ ಹಿಡಿದಿರುವ ನೋಟ ಸಿನಿಮಾ ನೋಡುವ ಅಭಿಮಾನಿಗಳ ಕಾತರ ಹೆಚ್ಚಿಸಿತ್ತು.
ಇದನ್ನೂ ಓದಿ: 'ಸಂಜು ವೆಡ್ಸ್ ಗೀತಾ 2 ಬಿಡುಗಡೆಯಾಗುತ್ತಿರುವುದು ಗೊತ್ತಿರಲಿಲ್ಲ': ಮದುವೆ, ಸಿನಿಮಾ, ರಾಜಕೀಯದ ಬಗ್ಗೆ ರಮ್ಯಾ ಮಾತು
ಟಾಕ್ಸಿಕ್ ಚಿತ್ರೀಕರಣ ಕಳೆದ ವರ್ಷ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ಆರಂಭವಾಯಿತು. ಕೆಜಿಎಫ್ ಸರಣಿ ಸಿನಿಮಾಗಳೊಂದಿಗೆ ದೇಶಾದ್ಯಂತ ಖ್ಯಾತಿ ಗಳಿಸಿದ ನಂತರ ಯಶ್ ಕಡೆಯಿಂದ ಬರುತ್ತಿರುವ ಮೊದಲ ಸಿನಿಮಾ ಇದಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಬ್ಯಾನರ್‌ಗಳ ಅಡಿಯಲ್ಲಿ ವೆಂಕಟ್ ಕೆ.ನಾರಾಯಣ್ ಮತ್ತು ಯಶ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನವಿರುವ ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಬೆಟ್ಟದಷ್ಟು ನಿರೀಕ್ಷೆಗಳಿವೆ.