ಸರಿ ಸುಮಾರು ಹತ್ತು ವರ್ಷಗಳಿಂದ ಸ್ನೇಹಿತರಾಗಿ ಗುರುತಿಸಿಕೊಂಡಿದ್ದ ನಟಿ ಹರ್ಷಿಕಾ ಪೂಣಚ್ಚ ಮತ್ತು ನಟ ಭುವನ್ ಪೊನ್ನಣ್ಣ ಕಳೆದ ವರ್ಷ ದಾಂಪತ್ಯ ಜೀವನ ಆರಂಭಿಸಿದ್ದರು. ಇದೀಗ ತಮ್ಮ ಮೊದಲ ಮಗುವನ್ನು ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಹೌದು, ತಾವು ಪೋಷಕರಾಗಲಿರುವ ಶುಭ ಸುದ್ದಿಯನ್ನು ಸ್ವತಃ ಈ ತಾರಾ ಜೋಡಿಯೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಗುರುತಿಸಿಕೊಂಡಿರುವವರ ಪೈಕಿ ಕೆಲವರು, ಇದೇ ಕ್ಷೇತ್ರದಲ್ಲಿರುವವರನ್ನು ಪ್ರೀತಿಸಿ ಯಶಸ್ವಿ ವೈವಾಹಿಕ ಜೀವನ ನಡೆಸಿರುವ ಕೆಲ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಆ ಪೈಕಿ ಹರ್ಷಿಕಾ, ಭುವನ್ ಜೋಡಿ ಕೂಡ ಒಂದು. ಚಿತ್ರರಂಗದಲ್ಲಿ ವೃತ್ತಿಜೀವನ ಆರಂಭಿಸುವ ವೇಳೆ ಪರಿಚಿತರಾಗಿ, ಸ್ನೇಹ ಪ್ರೇಮಕ್ಕೆ ತಿರುಗಿ ಸದ್ಯ ಮಾದರಿ ದಂಪತಿಯಾಗಿ ಗುರುತಿಸಿಕೊಂಡಿದ್ದಾರೆ. ಇಂದು ಸೋಷಿಯಲ್ ಮೀಡಿಯಾದಲ್ಲಿ ತಾವು ಶೀಘ್ರದಲ್ಲೇ ತಂದೆ- ತಾಯಿ ಆಗಲಿದ್ದೇವೆ ಎಂದು ತಿಳಿಸಿದ್ದಾರೆ.
ತಾರಾ ದಂಪತಿಯ ಸೋಷಿಯಲ್ ಮೀಡಿಯಾ ಪೋಸ್ಟ್ ಹೀಗಿದೆ.. ''ಗೆಳೆಯರೇ, ಇಂದಿನವರೆಗೂ ನಮ್ಮಿಬ್ಬರಿಗೆ ಸದಾ ಆಶೀರ್ವಾದಿಸುತ್ತಾ ಬಂದಿದ್ದೀರಿ. ಇನ್ನು ಮುಂದೆ ನಿಮ್ಮ ಪ್ರೀತಿ, ಆಶೀರ್ವಾದ ನಮ್ಮ ಈ ಇನ್ನೊಂದು ಪುಟ್ಟ ಜೀವದ ಮೇಲೂ ಇರಲಿ. ಅಕ್ಟೋಬರ್ಗೆ ಕಾತುರದಿಂದ ಕಾಯುತ್ತಿದ್ದೇವೆ. ಇಂತಿ ನಿಮ್ಮ ಭುವನ್, ಹರ್ಷಿಕಾ'' ಎಂದು ಬರೆದುಕೊಂಡಿದ್ದಾರೆ. ಈ ವಿಷಯ ತಿಳಿಸುವ ಜೊತೆಗೆ ಕೊಡಗಿನ ಸಾಂಪ್ರದಾಯಿಕ ಶೈಲಿಯ ಉಡುಗೆ ತೊಟ್ಟು ಫೋಟೋ, ವಿಡಿಯೋ ಮಾಡಿಸಿದ್ದಾರೆ.
ಬಹುಭಾಷಾ ಸಿನಿಮಾ, ಕೋವಿಡ್ ಸಂದರ್ಭ ಸಮಾಜಮುಖಿ ಕೆಲಸಗಳ ಮೂಲಕ ಗುರುತಿಸಿಕೊಂಡಿದ್ದ ಈ ಜೋಡಿ 2023ರ ಆಗಸ್ಟ್ 24ರಂದು ವಿರಾಜಪೇಟೆಯ ಅಮ್ಮತ್ತಿಯಲ್ಲಿ ಕುಟುಂಬಸ್ಥರು, ಸ್ನೇಹಿತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಹಸೆಮಣೆ ಏರಿದ್ದರು. ಮದುವೆಯಾಗಿ ವರ್ಷ ತುಂಬುವುದರೊಳಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಾಲ್ಕು ತಿಂಗಳಲ್ಲಿ ಈ ಜೋಡಿಯ ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ.