ಸೃಜನ್ ಲೋಕೇಶ್ ಅವರು ಕನ್ನಡ ಚಿತ್ರರಂಗದ ಮಾತಿನ ಮಲ್ಲ ಅಂದ್ರೆ ತಪ್ಪಾಗಲ್ಲ. ಆಕರ್ಷಕ ಮಾತಿನ ಶೈಲಿಯಿಂದಲೇ ಸ್ಯಾಂಡಲ್ವುಡ್ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿರುವ ನಿರೂಪಕ. ನಟನಾಗಿ, ನಿರ್ಮಾಪಕನಾಗಿ ಎಲ್ಲದಕ್ಕಿಂತ ಹೆಚ್ಚಾಗಿ ಅತ್ಯುತ್ತಮ ನಿರೂಪಕನಾಗಿ ಗುರುತಿಸಿಕೊಂಡಿರುವ ಸೃಜನ್ ಲೋಕೇಶ್ ಅವರೀಗ ಡೈರೆಕ್ಷನ್ ಕ್ಯಾಪ್ ತೊಟ್ಟಿದ್ದಾರೆ.
ಉತ್ತಮ ಹೋಸ್ಟ್ ಆಗಿ ಗುರುತಿಸಿಕೊಂಡಿರುವ ಸೃಜನ್ ನಿರ್ದೇಶನದ ಅಖಾಡಕ್ಕಿಳಿದಿದ್ದಾರೆ. ಕೆಲ ತಿಂಗಳ ಹಿಂದೆ ''GST'' ಎಂಬ ವಿಭಿನ್ನ ಶೀರ್ಷಿಕೆಯುಳ್ಳ ಚಿತ್ರದ ಮುಹೂರ್ತ ಕಾರ್ಯಕ್ರಮ ಮಾಡಿದ್ದ ಸೃಜನ್ ಲೋಕೇಶ್ ತಂಡ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿದೆ. ಸದ್ಯ ಡಬ್ಬಿಂಗ್ ಕೆಲಸದಲ್ಲಿ ತಂಡ ಬ್ಯುಸಿಯಾಗಿದೆ. ಇನ್ನೂ ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ. ಬೆಂಗಳೂರಿನಲ್ಲೇ, ಅದರಲ್ಲೂ ಅಭಿಮಾನ್ ಸ್ಟುಡಿಯೋದಲ್ಲಿ ನಿರ್ಮಿಸಲಾಗಿರುವ ಅದ್ಧೂರಿ ಸೆಟ್ನಲ್ಲೇ ಹೆಚ್ಚಿನ ಚಿತ್ರೀಕರಣ ಮಾಡಿರುವ ಜಿಎಸ್ಟಿ ಸಿನಿಮಾದ ಡಬ್ಬಿಂಗ್ ಜೋರಾಗಿಯೇ ನಡೆಯುತ್ತಿದೆ.
ವಿಭಿನ್ನ ಶೀರ್ಷಿಕೆಯ "GST" ಚಿತ್ರದ ಮತ್ತೊಂದು ವಿಶೇಷತೆಯೆಂದರೆ, ನಿರ್ಮಾಪಕ ಸಂದೇಶ್ ಅವರು ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸಿರುವುದು. ಅವರ ಪಾತ್ರ ಏನೆಂಬುದನ್ನು ನಿರ್ದೇಶಕ ಸೃಜನ್ ಲೋಕೇಶ್ ಸೀಕ್ರೆಟ್ ಆಗಿ ಇಟ್ಟಿದ್ದಾರೆ. ಅಲ್ಲದೇ ಚಿತ್ರದಲ್ಲಿ ಗಿರಿಜಾ ಲೋಕೇಶ್, ಸೃಜನ್ ಲೋಕೇಶ್ ಹಾಗೂ ಸೃಜನ್ ಪುತ್ರ ಸುಕೃತ್ ಕೂಡ ಅಭಿನಯಿಸುತ್ತಿದ್ದಾರೆ. ಅಜ್ಜಿ, ಮಗ ಹಾಗೂ ಮೊಮ್ಮಗ ಈ ಮೂವರನ್ನು ಒಟ್ಟಿಗೆ ತೆರೆ ಮೇಲೆ ನೋಡುವ ಅವಕಾಶ ಸಿಗಲಿದೆ. ತಮ್ಮ ನಿರ್ದೇಶನದ ಚೊಚ್ಚಲ ಚಿತ್ರದಲ್ಲೇ ಸೃಜನ್ ಲೋಕೇಶ್ ತಾಯಿ ಹಾಗೂ ಮಗನಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪರಿಶುದ್ಧ ಮನರಂಜನೆಯ ಕಥಾಹಂದರ ಹೊಂದಿರುವ "ಜಿಎಸ್ಟಿ"ಗೆ, " ಘೋಸ್ಟ್ ಇನ್ ಟ್ರಬಲ್" ಎಂಬ ಅಡಿಬರಹವಿದೆ.