ಕನ್ನಡ ಚಿತ್ರರಂಗಕ್ಕೆ ದೊಡ್ಮನೆ ಕುಟುಂಬದ ಕೊಡುಗೆ ಅಪಾರ. ವರನಟ ಡಾ.ರಾಜ್‍ಕುಮಾರ್ ಹಾಗೂ ಪಾರ್ವತಮ್ಮ ರಾಜ್‍ಕುಮಾರ್ ಅವರ ಸಾಮಾಜಿಕ ಮತ್ತು ಚಿತ್ರರಂಗದ ಕೊಡುಗೆ ದೊಡ್ಡದಿದೆ. ಇದೇ ಹಾದಿಯಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಮತ್ತು ಪತ್ನಿ ಗೀತಾ ಹೆಜ್ಜೆ ಹಾಕುತ್ತಿದ್ದಾರೆ. ಗೀತಾ ಶಿವರಾಜ್ಕುಮಾರ್ ನಿರ್ಮಾಪಕಿಯಾಗಿ ಚಂದನವನದ ಭಾಗವಾಗಿದ್ದಾರೆ.
ಗೀತಾ ಪಿಕ್ಚರ್ಸ್ ಬ್ಯಾನರ್ ಹುಟ್ಟು ಹಾಕಿ ಮೊದಲನೆಯದಾಗಿ ವೇದ ಎಂಬ ಸಿನಿಮಾ ನಿರ್ಮಿಸಿದ ಅವರೀಗ ಕಂಟೆಂಟ್ ಸಿನಿಮಾಗಳತ್ತ ಗಮನ ಹರಿಸಿದ್ದಾರೆ. ಇತ್ತೀಚೆಗೆ ಬಂದ ಭೈರತಿ ರಣಗಲ್ ಸೂಪರ್ ಹಿಟ್ ಆಗಿದೆ. ಅಲ್ಲದೇ ಕಳೆದ ತಿಂಗಳಷ್ಟೇ ಎ ಫಾರ್ ಆನಂದ್ ಸಿನಿಮಾವನ್ನು ಘೋಷಿಸಲಾಗಿದೆ. ಸದ್ಯ ಪಾರ್ವತಮ್ಮ ರಾಜ್‍ಕುಮಾರ್ ಹುಟ್ಟು ಹಬ್ಬದ ಸಲುವಾಗಿ ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಹೊಸ ಸಿನಿಮಾ ಘೋಷಣೆಯಾಗಿದೆ.
ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಳ್ಳಲಿರುವ ಸಿನಿಮಾದಲ್ಲಿ ಹೀರೋ ಯಾರು ಎಂಬ ಕುತೂಹಲ ಸಹಜ. ಶಿವರಾಜ್ಕುಮಾರ್ ಸಹೋದರಿ ಪೂರ್ಣಿಮಾ ಅವರ ಪುತ್ರ ಧೀರೇನ್ ರಾಮ್ಕುಮಾರ್ ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಗೀತಾ ಪಿಕ್ಚರ್ಸ್ ಬ್ಯಾನರ್ ಅಡಿ 'ಪ್ರೊಡಕ್ಷನ್ ನಂಬರ್ #4 The Search Begins' ಎಂಬ ಬರಹದೊಂದಿಗೆ ಹೊಸ ಪೋಸ್ಟರ್ ಅನಾವರಣಗೊಂಡಿದೆ. ಶಾಖಾಹಾರಿ ಎಂಬ ಸಿನಿಮಾ ಮಾಡಿ ಕನ್ನಡ ಚಿತ್ರರಂಗದಲ್ಲಿ ಭರವಸೆ ಹುಟ್ಟಿಸಿರೋ ನಿರ್ದೇಶಕ ಸಂದೀಪ್ ಸುಂಕದ್ ಅವರು ಧೀರೇನ್ ನಟನೆಯ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.