ಕರ್ನಾಟಕ

karnataka

ETV Bharat / entertainment

ವಂಚನೆ ಆರೋಪ ಪ್ರಕರಣ: ಸಮಾಜ ಸೇವಕ, ನಟ ಸೋನು ಸೂದ್ ವಿರುದ್ಧ ಅರೆಸ್ಟ್ ವಾರಂಟ್​​​ - SONU SOOD

ಲುಧಿಯಾನ ಮೂಲದ ವಕೀಲ ರಾಜೇಶ್ ಖನ್ನಾ ಅವರು ಮೋಹಿತ್ ಶುಕ್ಲಾ ಎಂಬುವವರ ವಿರುದ್ಧ 10 ಲಕ್ಷ ರೂಪಾಯಿ ವಂಚನೆ ಆರೋಪ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಸೋನು ಸೂದ್ ಸಾಕ್ಷಿ ಹೇಳಬೇಕಿತ್ತು.

Sonu Sood
ನಟ ಸೋನು ಸೂದ್ (Photo: ANI)

By ETV Bharat Entertainment Team

Published : Feb 7, 2025, 10:03 AM IST

ಲುಧಿಯಾನ (ಪಂಜಾಬ್): ವಂಚನೆ ಆರೋಪ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಹಾಗೂ ಸಮಾಜ ಸೇವಕ ಸೋನು ಸೂದ್ ವಿರುದ್ಧ ಪಂಜಾಬ್ ನ್ಯಾಯಾಲಯ ಅರೆಸ್ಟ್ ವಾರಂಟ್​ ಹೊರಡಿಸಿದೆ. ಲುಧಿಯಾನ ಜುಡಿಷಿಯಲ್​ ಮ್ಯಾಜಿಸ್ಟ್ರೇಟ್ ರಮಣ್​​ಪ್ರೀತ್ ಕೌರ್ ಅವರು ಈ ವಾರಂಟ್​​​​ ಹೊರಡಿಸಿದ್ದಾರೆ.

ಲುಧಿಯಾನ ಮೂಲದ ವಕೀಲ ರಾಜೇಶ್ ಖನ್ನಾ ಅವರು ಮೋಹಿತ್ ಶುಕ್ಲಾ ಎಂಬುವವರ ವಿರುದ್ಧ 10 ಲಕ್ಷ ರೂಪಾಯಿ ವಂಚನೆ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ. ನಕಲಿ ರಿಜಿಕಾ ಕಾಯ್ನ್​​​​ನಲ್ಲಿ ಹೂಡಿಕೆ ಮಾಡುವಂತೆ ಆಮಿಷ ಒಡ್ಡಲಾಗಿದೆ, ಇಲ್ಲಿ ವಂಚನೆ ನಡೆದಿದೆ ಎಂದು ಆರೋಪಿಸಿದ್ದಾರೆ.

ಸೋನು ಸೂದ್ ವಿರುದ್ಧ ಅರೆಸ್ಟ್ ವಾರೆಂಟ್ (ANI)

ಸಾಕ್ಷ್ಯ ಹೇಳಲು ನಟ ಸೋನು ಸೂದ್ ಅವರನ್ನು ನ್ಯಾಯಾಲಯಕ್ಕೆ ಕರೆಯಲಾಗಿತ್ತು. ಆದರೆ ಅವರು ಹಾಜರಾಗಲು ವಿಫಲರಾದ ಕಾರಣ ಅರೆಸ್ಟ್ ವಾರಂಟ್​​​ ಹೊರಡಿಸಲಾಯಿತು. ಲುಧಿಯಾನ ನ್ಯಾಯಾಲಯವು ತನ್ನ ಆದೇಶದಲ್ಲಿ, ಮುಂಬೈನ ಅಂಧೇರಿ ಪಶ್ಚಿಮದಲ್ಲಿರುವ ಓಶಿವಾರಾ ಪೊಲೀಸ್ ಠಾಣೆಯ ಅಧಿಕಾರಿಗೆ ಸೋನು ಸೂದ್ ಅವರನ್ನು ಬಂಧಿಸುವಂತೆ ನಿರ್ದೇಶಿಸಿದೆ.

ಆದೇಶದಲ್ಲಿ, "R/O H.NO 605/606 ಕ್ಯಾಸಾಬ್ಲಾಂಕ್ ಅಪಾರ್ಟ್‌ಮೆಂಟ್‌ನ ನಿವಾಸಿ ಸೋನು ಸೂದ್ (S/o, W/o, D/o) ಅವರಿಗೆ ಸಮನ್ಸ್ ಅಥವಾ ವಾರಂಟ್​​ ಅನ್ನು ಸರಿಯಾಗಿ ನೀಡಲಾಗಿದೆ. ಆದರೆ, ಅವರು ಹಾಜರಾಗಲು ವಿಫಲರಾಗಿದ್ದಾರೆ. ಸೋನು ಸೂದ್ ಅವರನ್ನು ಬಂಧಿಸಿ ನ್ಯಾಯಾಲಯದ ಎದುರು ಕರೆತರಲು ಆದೇಶಿಸಲಾಗಿದೆ" ಎಂದಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 10 ರಂದು ನಿಗದಿಪಡಿಸಲಾಗಿದೆ.

ಇದನ್ನೂ ಓದಿ:ಮಹಾಕುಂಭಮೇಳದಲ್ಲಿ 'ಕೆಜಿಎಫ್' ನಟಿ ಶ್ರೀನಿಧಿ ಶೆಟ್ಟಿ ಪವಿತ್ರ ಸ್ನಾನ

ಸೋನು ಸೂದ್ ಬ್ರ್ಯಾಂಡ್​ ಅಂಬಾಸಿಡರ್​​ ಆಗಿರುವ ಕಂಪನಿಗೆ ಸಂಬಂಧಿಸಿದ ವಂಚನೆ ಪ್ರಕರಣ ಇದಾಗಿದೆ ಎಂದು ಹೇಳಲಾಗಿದೆ. ಅವರು ಈ ಕಂಪನಿಗೆ ಅಧಿಕೃತವಾಗಿ ಬ್ರ್ಯಾಂಡ್​ ಅಂಬಾಸಿಡರ್​ ಹೌದೋ ಅಲ್ಲವೋ ಎಂಬುದು ಮುಂದಿನ ವಿಚಾರಣೆ ಹೊತ್ತಿಗೆ ತಿಳಿಯಲಿದೆ. ಬ್ರ್ಯಾಂಡ್​ ಅಂಬಾಸಿಡರ್​ ಎಂಬ ಆರೋಪ ಹಿನ್ನೆಲೆ ನಟನಿಗೆ ನಿನ್ನೆ, ಲುಧಿಯಾನ ಜಿಲ್ಲಾ ನ್ಯಾಯಾಲಯವು ನೋಟಿಸ್ ನೀಡಿ, ಸಮನ್ಸ್ ಜಾರಿ ಮಾಡಿದೆ.

ಸಮನ್ಸ್​​ ವಿಚಾರವನ್ನು ವಕೀಲ ರಾಜೇಶ್ ಖನ್ನಾ ವಿಷಯವನ್ನು ದೃಢಪಡಿಸಿದ್ದಾರೆ. ಅವರು ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 10ರಂದು ನಡೆಯಲಿದೆ.

ಇದನ್ನೂ ಓದಿ:ಮಹಿಳಾ ಅಭಿಮಾನಿಗೆ ಮತ್ತೆ ಮುತ್ತಿಟ್ಟ ಗಾಯಕ ಉದಿತ್​​ ನಾರಾಯಣ್​​: ವಿಡಿಯೋ ವೈರಲ್​

ಬಹುಭಾಷಾ ನಟ ಸೋನು ಸೂದ್ ಅವರು ತಮ್ಮ ಸಮಾಜ ಸೇವೆಗಳಿಂದಾಗಿ ವ್ಯಾಪಕವಾಗಿ ಗುರುತಿಸಲ್ಪಟ್ಟಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಸೂದ್ ಚಾರಿಟಿ ಫೌಂಡೇಶನ್ ಮೂಲಕ ಆಂಧ್ರಪ್ರದೇಶ ಸರ್ಕಾರಕ್ಕೆ ನಾಲ್ಕು ಆಂಬ್ಯುಲೆನ್ಸ್‌ಗಳನ್ನು ಡೊನೇಟ್​​ ಮಾಡಿ ಗಮನ ಸೆಳೆದಿದ್ದರು. ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ನಟನಿಗೆ ಧನ್ಯವಾದ ಅರ್ಪಿಸಿದ್ದರು. ಅಂದು ಮಾತನಾಡಿದ್ದ ನಟ, ಜನರಿಗೆ ಸಹಾಯ ಮಾಡುವ ಮನೋಭಾವ ಕೋವಿಡ್​ ಸಂದರ್ಭ ಶುರುವಾಯಿತು. ಇದನ್ನು ಮುಂದುವರಿಸಲು ಬಯಸುತ್ತೇನೆ ಎಂದು ತಿಳಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸೂದ್​: - ಸೋನು​​​ ಎಕ್ಸ್​​ ಪೋಸ್ಟ್​​ನಲ್ಲೇನಿದೆ? ''ಸೋಷಿಯಲ್​ ಮೀಡಿಯಾ ಪ್ಲ್ಯಾಟ್​​​ಫಾರ್ಮ್​​ಗಳಲ್ಲಿ ಪ್ರಸಾರವಾಗುವ ಸುದ್ದಿಗಳು ಹೆಚ್ಚು ಸಂವೇದನಾಶೀಲವಾಗಿವೆ ಎಂಬುದನ್ನು ನಾವು ಸ್ಪಷ್ಟಪಡಿಸಬೇಕಾಗಿದೆ. ವಿಷಯಗಳನ್ನು ನೇರವಾಗಿ ಹೇಳುವುದಾದರೆ, ನಮಗೆ ಯಾವುದೇ ಸಂಬಂಧವಿಲ್ಲದ ಮೂರನೇ ವ್ಯಕ್ತಿಗೆ ಸಂಬಂಧಿಸಿದ ವಿಷಯದಲ್ಲಿ ಗೌರವಾನ್ವಿತ ನ್ಯಾಯಾಲಯವು ನಮ್ಮನ್ನು ಸಾಕ್ಷಿಯಾಗಿ ಸಮನ್ಸ್ ಮಾಡಿದೆ. ನಮ್ಮ ವಕೀಲರು ಪ್ರತಿಕ್ರಿಯಿಸಿದ್ದಾರೆ ಮತ್ತು ಫೆಬ್ರವರಿ 10, 2025ರಂದು ನಾವು ಈ ವಿಷಯದಲ್ಲಿ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸುವ ಹೇಳಿಕೆಯನ್ನು ನೀಡುತ್ತೇವೆ.

ನಾವು ಬ್ರ್ಯಾಂಡ್​ ಅಂಬಾಸಿಡರ್​​​​ ಅಲ್ಲ ಅಥವಾ ಯಾವುದೇ ರೀತಿಯಲ್ಲಿ ನಮಗೆ ಸಂಬಂಧವಿಲ್ಲ. ಇದನ್ನು ಕೇವಲ ಅನಗತ್ಯವಾಗಿ ಮಾಧ್ಯಮ ಗಮನ ಸೆಳೆಯುವ ಉದ್ದೇಶದಿಂದ ಮಾತ್ರ ಮಾಡಲಾಗಿದೆ. ಸೆಲೆಬ್ರಿಟಿಗಳು ಸುಲಭವಾಗಿ ಗುರಿಯಾಗುತ್ತಿರುವುದು ದುಃಖಕರ. ಈ ವಿಷಯದಲ್ಲಿ ನಾವು ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details