ಬಾಲಿವುಡ್ನ ಬಹುಬೇಡಿಕೆ ಕಲಾವಿದರಾದ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯ ವೈಮಾನಿಕ ಆ್ಯಕ್ಷನ್ ಸಿನಿಮಾ 'ಫೈಟರ್' ಗುರುವಾರ (ಜನವರಿ 25) ಚಿತ್ರಮಂದಿರ ಪ್ರವೇಶಿಸಿದೆ. ಮೊದಲ ದಿನ ಅಭಿಮಾನಿಗಳಿಂದ ಬಹುತೇಕ ಸಕಾರಾತ್ಮಕ ಪ್ರತಿಕ್ರಿಯೆ ಸ್ವೀಕರಿಸಿರುವ ಚಿತ್ರ ಉತ್ತಮ ಅಂಕಿ - ಅಂಶಗಳೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿದೆ. ರಜಾದಿನವಲ್ಲವಾದರೂ, ಸಹಜ ದಿನದಲ್ಲೂ ಕೂಡ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ. ಆದರೆ ಸಿನಿಮಾ ಗಳಿಕೆಯ ನಿರೀಕ್ಷೆ ಕೊಂಚ ಹೆಚ್ಚೇ ಇತ್ತು.
ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, 'ಫೈಟರ್' ತೆರೆಗಪ್ಪಳಿಸಿದ ಮೊದಲ ದಿನ ಸರಿಸುಮಾರು 22 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇಂದು ಗಣರಾಜ್ಯೋತ್ಸವದ ರಜೆ ಇರುವ ಹಿನ್ನೆಲೆ ಗಳಿಕೆ ಏರಿಕೆ ಆಗೋ ನಿರೀಕ್ಷೆ ಇದೆ. ಇನ್ನುಳಿದಂತೆ ನಾಳೆ ನಾಡಿದ್ದು ವಾರಾಂತ್ಯವಾಗಿರುವ ಹಿನ್ನೆಲೆ, 'ಫೈಟರ್' ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಸಿನಿಮಾ ಬಹುತೇಕ ಸಕಾರಾತ್ಮಕ ಸ್ಪಂದನೆ ಸ್ವೀಕರಿಸಿದೆ. ಈ ಹಿನ್ನೆಲೆ ಪ್ರೇಕ್ಷಕರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಸಿನಿ ತಜ್ಞರ ಅಂದಾಜಿನ ಪ್ರಕಾರ, ಚಿತ್ರ ಎರಡನೇ ಸುಮಾರು 35 ಕೋಟಿ ರೂ. ಗಳಿಸಲಿದೆ. ವಾರಾಂತ್ಯದಲ್ಲಿ, ವಿಶೇಷವಾಗಿ ಭಾನುವಾರದ ಕಲೆಕ್ಷನ್ ಅಂಕಿ - ಅಂಶಗಳ ಮೇಲೆ ಸಿನಿಮಾದ ಯಶಸ್ಸು ನಿರ್ಧಾರವಾಗಲಿದೆ.
2024ರ ಮೊದಲ ಬಿಗ್ ಬಜೆಟ್ ಪ್ರೊಜೆಕ್ಟ್ ಇದು. ಚಿತ್ರತಂಡ ಕೂಡ ಸ್ಟಾರ್ ನಟ-ನಟಿಯರು, ನಿರ್ದೇಶಕರಿಂದ ಕೂಡಿದೆ. ಹಾಗಾಗಿ ಹೆಚ್ಚಿನ ಕಲೆಕ್ಷನ್ ನಿರೀಕ್ಷಿರೋದು ಆಶ್ಚರ್ಯದ ವಿಚಾರವೇನಲ್ಲ. ಗಣರಾಜ್ಯೋತ್ಸವದಂದು ಮತ್ತು ವಾರಾಂತ್ಯದಲ್ಲಿ ಉತ್ತಮ ಅಂಕಿ ಅಂಶಗಳೊಂದಿಗೆ ಮುಂದುವರಿದರೆ, ಭಾನುವಾರದವರೆಗೆ ಅಂದರೆ ಮೊದಲ ನಾಲ್ಕು ದಿನಗಳಲ್ಲಿ 'ಫೈಟರ್' 100 ಕೋಟಿ ರೂ. ಕಲೆಕ್ಷನ್ ಮಾಡಲಿದೆ ಎಂದು ಅಂದಾಜಿಸಲಾಗಿದೆ.