ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್ ಸೀಸನ್ 11'ರ ಏಳನೇ ವಾರದ ಆಟ ಸಾಗಿದೆ. ಈ ವಾರದ ಟಾಸ್ಕ್ ಭಾಗವಾಗಿ ಜೋಡಿ ಚಟುವಟಿಕೆಗಳು ನಡೆಯುತ್ತಿವೆ. ಅದರಂತೆ, ಶಿಶಿರ್ ಮತ್ತು ಚೈತ್ರಾ ಒಂದು ಜೋಡಿಯಾಗಿ ಟಾಸ್ಕ್ನಲ್ಲಿ ಭಾಗಿಯಾಗುತ್ತಿದ್ದರು. ಆದ್ರೆ ತ್ರಿವಿಕ್ರಮ್‍ಗಾಗಿ ಶಿಶಿರ್ ಅವರನ್ನು ಕೈಬಿಟ್ಟು ಚೈತ್ರಾ ಎಡವಿದರೇನೋ ಎಂಬ ಭಾವ ಮೂಡುವಂತೆ ಮಾಡಿದ್ದಾರೆ. ಮನೆಯಲ್ಲಿ ಕೋಲಾಹಲ ಸೃಷ್ಟಿಯಾಗಿರುವ ಸುಳಿವನ್ನು ಪ್ರೊಮೋ ಬಿಟ್ಟುಕೊಟ್ಟಿದೆ.
''ತ್ರಿವಿಕ್ರಮ್‍ಗಾಗಿ ಶಿಶಿರ್ ಅವರ ಕೈಬಿಟ್ರಾ ಚೈತ್ರಾ?'' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನೊಂದಿಗೆ ಬಿಗ್ ಬಾಸ್ ಪ್ರೋಮೋ ಅನಾವರಣಗೊಂಡಿದೆ. ಶಿಶಿರ್ ಅವರ ಆಕ್ರೋಶ ಯಾರನ್ನೂ ಬೆಚ್ಚಿಬೀಳಿಸುವಂತಿದೆ. 'ಚೈತ್ರಾ ನಿಜವಾದ ನಟಿ', ನಾವಲ್ಲ ಎಂದು ಹೇಳಿಕೆ ಕೊಡೋ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ನೀವು ನಿಮ್ಮ ಜೋಡಿ ಸದಸ್ಯನನ್ನು ಮುರಿದು ತ್ರಿವಿಕ್ರಮ್ ಜೊತೆ ಜೋಡಿಯಾಗಿ ಟಾಸ್ಕ್ನಲ್ಲಿ ಭಾಗಿಯಾಗಲು ಇಚ್ಛಿಸುತ್ತೀರೇ ಎಂದು ಬಿಗ್ ಬಾಸ್ ಸ್ಪರ್ಧಿಗಳಿಗೆ ಅವಕಾಶ ಕೊಟ್ಟಿದ್ದಾರೆ. ಅದಕ್ಕೆ ಚೈತ್ರಾ ಕುಂದಾಪುರ ಅವರು ಈ ಆಫರ್ ಒಪ್ಪಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ. ಹಾಗಾಗಿ, ಶಿಶಿರ್ ಈ ವಾರ ಟಾಸ್ಕ್ಗಳಿಂದ ಹೊರಬೀಳುವ ಸಾಧ್ಯತೆಗಳಿದ್ದು, ಅದು ಅವರ ನಾಮಿನೇಷನ್ಸ್ ಮೇಲೆ ಪರಿಣಾಮ ಬೀಳಲಿದೆ. ಕ್ಯಾಪ್ಟನ್ ಆಗಿರುವ ತ್ರಿವಿಕ್ರಮ್ ಅವರು ಆಟಗಳನ್ನು ನೋಡಿಕೊಳ್ಳುತ್ತಿದ್ದರು. ಇನ್ನು ಜೋಡಿಯಾಗಿ ಟಾಸ್ಕ್ನಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ:ಧರ್ಮ- ಅನುಷಾ ನಡುವೆ ಹುಳಿ ಹಿಂಡಿದ ನಾಮಿನೇಷನ್: ಅಸಲಿ ಆಟ ಶುರು ಮಾಡಿದ ಬಿಗ್ ಬಾಸ್
ಈ ವಾರದಲ್ಲಿ ಚೈತ್ರಾ ಕುಂದಾಪುರ ಅವರ ಜೋಡಿಯಾಗಿದ್ದ ಶಿಶಿರ್ ಅವರು ಈ ನಿರ್ಧಾರದಿಂದ ಅಸಮಾಧಾನಗೊಂಡಿದ್ದು, ನಾನೇನು ಕಡ್ಲೆಪುರಿ ತಿಂತಿದ್ನಾ ಇಷ್ಟು ದಿನ ಎಂದು ತಿಳಿಸಿದ್ದಾರೆ. ತ್ರಿವಿಕ್ರಮ್ ಅವರು ದೈಹಿಕವಾಗಿ ಮಾನಸಿಕವಾಗಿ ಬಹಳ ಗಟ್ಟಿಯಾಗಿದ್ದಾರೆ ಎಂದು ಚೈತ್ರಾ ತಮ್ಮ ಕಾರಣ ಒದಗಿಸಿದ್ದಾರೆ. ಮಾನಸಿಕ ಅನ್ನೋ ಕಾರಣ ಕೊಡ್ತಾರೆ, ಇಷ್ಟು ದಿನ ಮಾನಸಿಕ ಏನಾಗಿತ್ತು?, ನಾಮಿನೇಷನ್ ಅಂತಾ ಬಂದಾಗ ಅಯ್ಯೋ ಅಮ್ಮಾ ಅಂತಾ ಹೇಳಿಬಿಡ್ತಾರೆ. 12 ವರ್ಷಗಳಿಂದ ನಟಿಸುತ್ತಾ ಬಂದಿರೋ ನಾವಲ್ಲ ಕಲಾವಿದರು. ಇಲ್ಲಿ ಇದ್ದಾರೆ ನೋಡಿ ನಿಜವಾದ ಆ್ಯಕ್ಟರ್ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಸಂದರ್ಭ, ಈ ವಾರ ಒಬ್ಬರನ್ನು ತಮ್ಮ ಟಾಸ್ಕ್ನಿಂದ ಹೊರ ಇಡುತ್ತಾರೆ ಅನ್ನೋದು ನನಗೆ ದೇವರಾಣೆ ಗೊತ್ತಿರಲಿಲ್ಲ ಅಣ್ಣಾ ಎಂದು ಶಿಶಿರ್ ಬಳಿ ಚೈತ್ರಾ ತಮ್ಮ ಸ್ಪಷ್ಟನೆ ಕೊಟ್ಟಿದ್ದಾರೆ.
ಇದನ್ನೂ ಓದಿ:ಬರಲಿದೆ ಅನಂತ್ ಕುಮಾರ್ ಸಿನಿಮಾ: 'ಶ್ರೀ ವಿಜಯ ದಾಸರು ಭಾಗ 2'ಕ್ಕೆ ತೇಜಸ್ವಿನಿ ಅನಂತ್ ಕುಮಾರ್ ಸಪೋರ್ಟ್
ಅಣ್ಣ ತಂಗಿಯಂತೆ ಗುರುತಿಸಿಕೊಂಡಿದ್ದ ಚೈತ್ರಾ ಮತ್ತು ಶಿಶಿರ್ ನಡುವೆ ಇತ್ತೀಚೆಗೆ ಕೆಲ ಚರ್ಚೆಗಳು ನಡೆದಿದ್ದವು. ಅದಾಗ್ಯೂ ಪರಸ್ಪರ ಮಾತನಾಡಿಕೊಂಡು ಸರಿಪಡಿಸಿ ಹೋಗುವ ಮನಸ್ಸು ಮಾಡಿದ್ದರು. ಆದ್ರೆ ಚೈತ್ರಾ ಅವರ ಇಂದಿನ ನಿರ್ಧಾರ ಮತ್ತು ಶಿಶಿರ್ ಅವರ ಪ್ರತಿಕ್ರಿಯೆ ಗಮನಿಸಿದ್ರೆ ಸ್ನೇಹ ಹೀಗೆ ಸಾಗುವುದಿಲ್ಲವೇನೋ ಎಂದೆನಿಸುತ್ತಿದೆ. ಮುಂದೇನಾಗುತ್ತೆ? ಅನ್ನೋ ಕುತೂಹಲದಲ್ಲಿ ಪ್ರೇಕ್ಷಕರಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸಲು ಕಾತರರಾಗಿದ್ದಾರೆ.