ಒಂದೊಳ್ಳೆ ಕಂಟೆಂಟ್ ಜೊತೆಗೆ ಮೆಸೇಜ್ ಇರುವ ಸಿನಿಮಾಗಳನ್ನು ಕನ್ನಡ ಸಿನಿಪ್ರಿಯರು ಎಂದೂ ಕೈಬಿಟ್ಟಿಲ್ಲ ಅನ್ನೋದಕ್ಕೆ ಸದ್ಯ ರಾಜ್ಯಾದ್ಯಂತ ಬಿಡುಗಡೆ ಆಗಿರುವ 'ಭೀಮ' ಸಿನಿಮಾ ಸಾಕ್ಷಿ. ಹೌದು, 2024ರ ಅರ್ಧ ವರ್ಷ ಯಾವುದೇ ಸ್ಟಾರ್ ಸಿನಿಮಾಗಳಿಲ್ಲದೇ ಸಿಂಗಲ್ ಸ್ಕ್ರೀನ್ ಥಿಯೇಟರ್ಸ್ ಮಾಲೀಕರು ಹಾಗೂ ಕಾರ್ಮಿಕರು ಬಹಳ ಸಂಕಷ್ಟದಲ್ಲಿದ್ದರು. ಕೆಲವೆಡೆ ಕನ್ನಡ ಚಿತ್ರಗಳಿಲ್ಲದೇ ಸಿಂಗಲ್ ಸ್ಕ್ರೀನ್ ಥಿಯೇಟರ್ ಮಾಲೀಕರು ಮುಚ್ಚುವ ನಿರ್ಧಾರಕ್ಕೂ ಬಂದಿದ್ದರು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಧೈರ್ಯ ಮಾಡಿ ಚಿತ್ರಮಂದಿರಕ್ಕೆ ಬಂದ ದುನಿಯಾ ವಿಜಯ್ ಅವರ ಭೀಮ ಚಿತ್ರ ಅಭೂತಪೂರ್ವ ಯಶ ಕಂಡಿದೆ. ವಿಜಯ್ ನಟಿಸಿ, ನಿರ್ದೇಶಿಸಿರುವ ಸಿನಿಮಾ ಉತ್ತಮ ರೆಸ್ಪಾನ್ಸ್ ಸ್ವೀಕರಿಸುವುದರ ಜೊತೆ ಬಾಕ್ಸ್ ಆಫೀಸ್‌ನಲ್ಲಿ ಕಮಾಲ್ ಮಾಡಿದೆ.
ಈ ಮೊದಲೇ ಹೇಳಿದಂತೆ 'ಭೀಮ' ಪಕ್ಕಾ ಮಾಸ್ ಎಂಟರ್ಟೈನ್ಮೆಂಟ್ ಚಿತ್ರ. ಸಮಾಜಕ್ಕೊಂದು ಸಂದೇಶವೂ ಇದೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಸಂಕಷ್ಟದಲ್ಲಿದ್ದ ಹೊತ್ತಲ್ಲಿ ಥಿಯೇಟರ್ಗೆ ಲಗ್ಗೆ ಇಟ್ಟು, ಚಿತ್ರರಂಗ ಹಾಗೂ ಚಿತ್ರಮಂದಿರದ ಮಾಲೀಕರು, ಕಾರ್ಮಿಕರಿಗೆ ಹೊಸ ಹುರುಪು ತಂದಿದೆ. ಅದಕ್ಕೆ ಸಾಕ್ಷಿಯೆಂಬಂತೆ ಸಿಂಗಲ್ ಸ್ಕ್ರೀನ್ ಜೊತೆಗೆ ಮಲ್ಟಿಪ್ಲೆಕ್ಸ್ ಥಿಯೇಟರ್ಗಳಲ್ಲೂ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಅಂದ್ರೆ ಬೆಂಗಳೂರಿನ ಮಾಲ್‌ವೊಂದಕ್ಕೆ ದುನಿಯಾ ವಿಜಯ್ ಭೇಟಿ ನೀಡಿ ಸಿನಿಮಾ ನೋಡಿದವರ ಅಭಿಪ್ರಾಯ ಕೇಳಿದ್ದಾರೆ. ಹೆಣ್ಣುಮಕ್ಕಳು ಕೂಡಾ ಚಿತ್ರಕ್ಕೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರದಲ್ಲಿ ಖಡಕ್ ಡೈಲಾಗ್, ಭರ್ಜರಿ ಆ್ಯಕ್ಷನ್, ಬೈಕ್ ವಿಲಿಂಗ್ ಜೊತೆಗೆ ಸದ್ಯ ಸಮಾಜದಲ್ಲಿ ನಡೆಯುತ್ತಿರುವ ಡ್ರಗ್ಸ್, ಗಾಂಜಾ ವಿಚಾರದ ಮೇಲೂ ಬೆಳಕು ಚೆಲ್ಲಲಾಗಿದೆ. ಬೆಂಗಳೂರಿನಲ್ಲಿ ಇದು ಎಷ್ಟರ ಮಟ್ಟಿಗೆ ಅವರಿಸಿಕೊಂಡಿದೆ ಅನ್ನೋದನ್ನು ಸಾಕ್ಷಿ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಅನ್ನೋದಕ್ಕೆ ಸ್ವತಃ ದುನಿಯಾ ವಿಜಯ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಲೈವ್ಗೆ ಬಂದು ಮಾಹಿತಿ ಕೊಟ್ಟಿದ್ದಾರೆ. ಇಂದಿನ ಯುವಕರು ಯುವತಿಯರು ಈ ಗಾಂಜಾ ಹಾಗೂ ಡ್ರಗ್ಸ್ಗೆ ವ್ಯಸನಿಗಳಾಗಿದ್ದು, ಇದನ್ನ ಹೇಗಾದರೂ ಮಟ್ಟ ಹಾಕಬೇಕನ್ನೋದು ದುನಿಯಾ ವಿಜಯ್ ಕಾಳಜಿ.