ನವದೆಹಲಿ: ಕಾಂತಾರ ಎಂಬ ಅದ್ಭುತ ಸಿನಿಮಾದ ಸಾರಥ್ಯ ವಹಿಸಿದ್ದ ರಿಷಬ್ ಶೆಟ್ಟಿ 'ಅತ್ಯುತ್ತಮ ನಟ' ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ನವದೆಹಲಿಯ ವಿಜ್ಞಾನ ಭವನದಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರದಾನ ಮಾಡಿದರು. ರಾಷ್ಟ್ರಪತಿ ಜೊತೆ ಸಚಿವ ಅಶ್ವಿನಿ ವೈಷ್ಣವ್ ಉಪಸ್ಥಿತರಿದ್ದರು.
ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಪಡೆದ ರಿಷಬ್ ಶೆಟ್ಟಿ (ANI) "ಪ್ರತೀ ಚಿತ್ರಗಳೂ ಪ್ರಭಾವ ಬೀರುತ್ತವೆ. ಸಮಾಜದಲ್ಲಿ ಬದಲಾವಣೆ ಅಥವಾ ಪ್ರಭಾವ ಬೀರುವ ಸಿನಿಮಾಗಳನ್ನು ಮಾಡುವುದೇ ನಮ್ಮ ಉದ್ದೇಶ. ನಾನು ಪ್ರೇಕ್ಷಕರಿಗೆ ಧನ್ಯವಾದ ಅರ್ಪಿಸುತ್ತೇನೆ. ರಾಷ್ಟ್ರೀಯ ಪ್ರಶಸ್ತಿಗಳು ಕಲಾವಿದನಿಗೆ ಅತ್ಯಂತ ಪ್ರತಿಷ್ಠಿತ ಬಹುಮಾನ" ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಈ ಚಿತ್ರ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಾಣುವ ಮೂಲಕ ದಾಖಲೆ ಬರೆದಿತ್ತು. 16 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣಗೊಂಡ ಚಿತ್ರ ಕಲೆಕ್ಷನ್ ಮಾಡಿದ್ದು 450 ಕೋಟಿ ರೂಪಾಯಿಗೂ ಅಧಿಕ!.
'ಕಾಂತಾರ 1', 2022ರ ಸೆಪ್ಟೆಂಬರ್ 30ರಂದು ಚಿತ್ರಮಂದಿರ ಪ್ರವೇಶಿಸಿತು. ಕರುನಾಡಿಗರನ್ನು ಗಮನದಲ್ಲಿಟ್ಟುಕೊಂಡು ಮಾಡಿದ್ದ ಈ ಚಿತ್ರ ಮಾತ್ರ ಗಡಿ ಮೀರಿ ವಿಸ್ತರಿಸಿತು. ಭಾರತೀಯ ಚಿತ್ರರಂಗದಾದ್ಯಂತ ಸದ್ದು ಮಾಡಿತು. ಪ್ರೇಕ್ಷಕರು, ಅಭಿಮಾನಿಗಳು ಮಾತ್ರವಲ್ಲದೇ ಸಿನಿವಲಯದ ಹೆಸರಾಂತರು ಈ ಸಿನಿಮಾವನ್ನು ಮೆಚ್ಚಿ ಕೊಂಡಾಡಿದ್ದರು. ಈ ಗೆಲುವು ಸಿನಿಮಾದ ಮತ್ತೊಂದು ಭಾಗ ಮೂಡಿಬರಲು ಕಾರಣವಾಯಿತು. ಚಿತ್ರದ ಪ್ರೀಕ್ವೆಲ್ ದೊಡ್ಡ ಮಟ್ಟದಲ್ಲಿ ನಿರ್ಮಾಣವಾಗುತ್ತಿದೆ.
ಈ ಚಿತ್ರದಲ್ಲಿನ ನಟನ ನಟನೆ ಅಮೋಘ. ಮೂಲತಃ ಕರಾವಳಿ ಅವರೇ ಆಗಿರುವ ಶೆಟ್ರು ಚಿತ್ರದ ಕಥೆಯನ್ನು ಅದ್ಭುತವಾಗಿ ರವಾನಿಸಿದ್ದರು. ಕರಾವಳಿ ಸಂಸ್ಕೃತಿಯನ್ನು ಎತ್ತಿಹಿಡಿದಿದ್ದ ಚಿತ್ರದ ಕ್ಲೈಮ್ಯಾಕ್ಸ್ ವರ್ಣನಾತೀತ. ಕೊನೆಯ 15-20 ನಿಮಿಷಳು ಸಿನಿಮಾದ ಹೈಲೆಟ್ ಅಂತಲೇ ಹೇಳಬಹುದು. ತಮ್ಮ ಮೈಮೇಲೆ ದೈವ ಆಹ್ವಾಹನೆಯಾದಂತೆ ರಿಷಬ್ ಶೆಟ್ಟಿ ಅದ್ಭುತವಾಗಿ ನಟಿಸಿದ್ದರು. ದೈವಾರಾಧನೆಯನ್ನು ತಮ್ಮ ಜೀವನದ ಪ್ರಮುಖ ವಿಷಯವನ್ನಾಗಿಸಿಕೊಂಡಿರುವ ಕರಾವಳಿ ಜನತೆಯಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು.
ಇದನ್ನೂ ಓದಿ:'ಕೆಜಿಎಫ್ 2'ಗೆ ಅತ್ಯುತ್ತಮ ಆ್ಯಕ್ಷನ್ ಡೈರೆಕ್ಷನ್ ರಾಷ್ಟ್ರಪ್ರಶಸ್ತಿ ಪ್ರದಾನ
ಆಗಸ್ಟ್ 16ರಂದು ಪ್ರತಿಷ್ಠಿತ ಪ್ರಶಸ್ತಿ ಘೋಷಣೆಯಾಗಿತ್ತು. ಅಂದು ಸೋಷಿಯಲ್ ಮೀಡಿಯಾ ಮೂಲಕ ಸರ್ವರಿಗೂ ತಮ್ಮ ಕೃತಘ್ಞತೆ ಅರ್ಪಿಸಿದ್ದ ರಿಷಬ್ ಶೆಟ್ಟಿ, 'ಕಾಂತಾರ ಸಿನಿಮಾಗೆ ಸಿಕ್ಕಿರುವ ರಾಷ್ಟ್ರೀಯ ಪ್ರಶಸ್ತಿಯ ಗೌರವಕ್ಕೆ ನಾನು ನಿಜವಾಗಿಯೂ ಆಭಾರಿ. ನನ್ನೀ ಪಯಣದಲ್ಲಿ ಭಾಗಿಯಾದ ಪ್ರತಿಯೊಬ್ಬ ಕಲಾವಿದರು, ತಂತ್ರಜ್ಞರು ಮತ್ತು ವಿಶೇಷವಾಗಿ ಹೊಂಬಾಳೆ ಫಿಲ್ಮ್ಸ್ ತಂಡಕ್ಕೆ ನಾನು ನನ್ನ ಹೃತ್ಫೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರೇಕ್ಷಕರು ಈ ಸಿನಿಮಾ ಕೊಟ್ಟಿರುವ ಬೆಂಬಲವು ನನ್ನಲ್ಲಿ ಇನ್ನಷ್ಟು ಜವಾಬ್ದಾರಿ ತುಂಬಿದೆ. ನಮ್ಮ ವೀಕ್ಷಕರಿಗೆ ಇನ್ನೂ ಉತ್ತಮ ಚಿತ್ರ ನೀಡಲು ಇನ್ನೂ ಹೆಚ್ಚು ಶ್ರಮಿಸಲು ನಾನು ಬದ್ಧನಾಗಿದ್ದೇನೆ. ಅತ್ಯಂತ ಗೌರವದಿಂದ ನಾನು ಈ ಪ್ರಶಸ್ತಿಯನ್ನು ಕನ್ನಡ ಪ್ರೇಕ್ಷಕರು, ದೈವ ನರ್ತಕರು, ಅಪ್ಪು ಸರ್ಗೆ ಅರ್ಪಿಸುತ್ತೇನೆ. ದೈವದ ಆಶೀರ್ವಾದದಿಂದ ನಾವು ಈ ಕ್ಷಣ ತಲುಪಿದ್ದೇವೆ' ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ:ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ: 'ಕೆಜಿಎಫ್ 2' ಅತ್ಯುತ್ತಮ ಕನ್ನಡ ಸಿನಿಮಾ
ಅಲ್ಲದೇ ಮಾಧ್ಯಮಗಳೊಂದಿಗೆ ಮಾತನಾಡಿದ್ದ ನಟ, "ಈ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ ನನ್ನ ಸಿನಿಮಾ ಜವಾಬ್ದಾರಿಯನ್ನು ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುವಂತಹ ಅತ್ಯುತ್ತಮ ಸಿನಿಮಾಗಳನ್ನು ಮಾಡುತ್ತೇನೆ" ಎಂದು ಭರವಸೆ ನೀಡಿದ್ದರು.