ಕನ್ನಡ ಚಿತ್ರರಂಗದಲ್ಲಿ ಜಟ್ಟ, ಮೈತ್ರಿ ಅಂತಹ ವಿಭಿನ್ನ ಚಿತ್ರಗಳ ಮೂಲಕ ಗುರುತಿಸಿಕೊಂಡಿರುವ ನಿರ್ದೇಶಕ ಬಿ.ಎಂ ಗಿರಿರಾಜ್. ಜಟ್ಟ ಚಿತ್ರದ ಬಳಿಕ ಬ್ರೇಕ್ ಪಡೆದುಕೊಂಡಿದ್ದ ನಿರ್ದೇಶಕ ಗಿರಿರಾಜ್ ಅವರೀಗ ಮತ್ತೊಂದು ವಿಭಿನ್ನ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದ್ದಾರೆ. 'ಪ್ರೊಡಕ್ಷನ್ ನಂ. 4' ಹೆಸರಿನಲ್ಲಿ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕ ಬಿ.ಜೆ ಭರತ್ ಸಂಗೀತ ಸಂಯೋಜನೆಯಲ್ಲಿ, ನಾಗರಭಾವಿಯ ಲೂಪ್ ರೆಕಾರ್ಡಿಂಗ್ ಸ್ಟುಡಿಯೋಸ್ನಲ್ಲಿ ಹಾಡುಗಳ ಧ್ವನಿಮುದ್ರಣ ಕೆಲಸಕ್ಕೆ ಚಾಲನೆ ನೀಡಲಾಯಿತು. ನಿರ್ದೇಶಕ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ತಮ್ಮ ಜಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಾಣ ಮಾಡುತ್ತಿರುವ ಚಿತ್ರವಿದು.
ಹಿಂದೆ ಸಾಂಗ್ ರೆಕಾರ್ಡಿಂಗ್ ಪೂಜೆ ಎಂದರೆ ಒಂದು ಸಡಗರ ಎಂದು ಮಾತು ಆರಂಭಿಸಿದ ನಿರ್ದೇಶಕ ಗಿರಿರಾಜ್, ಕೆಲ ವರ್ಷಗಳಿಂದ ಈ ಸಂಸ್ಕೃತಿ ಮರೆತು ಹೋಗಿದೆ. ಗುರು ದೇಶಪಾಂಡೆ ಮತ್ತೆ ಸಾಂಗ್ ರೆಕಾರ್ಡಿಂಗ್ ಪೂಜೆ ಮೂಲಕ ತಮ್ಮ ನೂತನ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಇಂದು (ಸೋಮವಾರ) ಒಳ್ಳೆ ದಿನ ಎಂದು ಪೂಜೆ ಮಾಡಿದ್ದೇವೆ. ಮರೆಯಾಗುತ್ತಿರುವ ಸಂಸ್ಕೃತಿಯನ್ನು ಮತ್ತೆ ತರುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡುತ್ತಿದ್ದೇವೆ. ಭರತ್ ಅವರ ಸಂಗೀತ ನಿರ್ದೇಶನದಲ್ಲಿ ಇಂದಿನಿಂದ ಸಾಂಗ್ ರೆಕಾರ್ಡಿಂಗ್ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು.
ನಿರ್ದೇಶಕ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ಮಾತನಾಡಿ, ಇದು ಜಿ ಸಿನಿಮಾಸ್ ಮೂಲಕ ನಿರ್ಮಾಣವಾಗುತ್ತಿರುವ ನಾಲ್ಕನೇ ಚಿತ್ರ. ನಮ್ಮ ಜಿ ಅಕಾಡೆಮಿ ಮೂಲಕ ಸಾಕಷ್ಟು ಮಕ್ಕಳಿಗೆ ನಟನಾ ತರಬೇತಿ ನೀಡಲಾಗುತ್ತಿದೆ. ಈಗಾಗಲೇ ಹತ್ತು ಬ್ಯಾಚ್ಗಳು ಯಶಸ್ವಿಯಾಗಿ ಪೂರ್ಣವಾಗಿದೆ. ಮಕ್ಕಳಿಗೆ ನಟನೆ ಕಲಿಸಿಕೊಟ್ಟು ಕಳುಹಿಸಿದರೆ ಸಾಲದು. ಅವರಿಗೆ ಸೂಕ್ತ ವೇದಿಕೆ ಕೂಡ ಕಲ್ಪಿಸಿಕೊಡಬೇಕು. ಅದರಲ್ಲೂ ವಿಶೇಷವಾಗಿ ಮಧ್ಯಮ ವರ್ಗದ ಮಕ್ಕಳಿಗೆ. ಆ ಸಲುವಾಗಿ ನಮ್ಮ ಈ ಚಿತ್ರದಲ್ಲಿ ನಮ್ಮ ಜಿ ಅಕಾಡೆಮಿಯ 15ಕ್ಕೂ ಅಧಿಕ ಮಕ್ಕಳು ನಟಿಸಲಿದ್ದಾರೆ.