ಸ್ಯಾಂಡಲ್ವುಡ್ನ ದೂದ್ ಪೇಡಾ ದಿಗಂತ್ ಹಾಗೂ ಯುವ ನಟಿ ಧನ್ಯಾ ರಾಮ್ ಕುಮಾರ್ ಮುಖ್ಯ ಭೂಮಿಕೆಯ 'ಪೌಡರ್' ಚಿತ್ರದ ಆಫೀಶಿಯಲ್ ಟೀಸರ್ ಬಿಡುಗಡೆಯಾಗಿದೆ. ಶೀರ್ಷಿಕೆಯಿಂದಲೇ ಸಿನಿ ರಸಿಕರ ಗಮನ ಸೆಳೆಯುತ್ತಿರುವ ಈ ಚಿತ್ರ ಭಾಗಶಃ ಚಿತ್ರೀಕರಣ ಮುಗಿಸಿದ್ದು, ಬಿಡುಗಡೆಗೂ ಸಿದ್ಧವಾಗಿದೆ.
ಇಬ್ಬರು ಯುವಕರು ಒಂದು ನಿಗೂಢವಾದ 'ಪೌಡರ್' ಪ್ರಭಾವದಿಂದಾಗಿ ದಿಢೀರನೇ ಸಿರಿವಂತರಾಗಲು ಮಾಡುವ ಪ್ರಯತ್ನಗಳು, ಅವರಿಗೆ ಎದುರಾಗುವ ಸಮಸ್ಯೆಗಳು ಇವೆಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಡುವ ಕಥೆಯೇ 'ಪೌಡರ್'. ಆ ಯುವಕರು ಎಲ್ಲ ಸಮಸ್ಯೆಗಳನ್ನು ಮೀರಿ ನಿಲ್ಲುವರೇ? ಅವರ ಕನಸುಗಳು ನನಸಾಗುವುದೇ ಎಂಬುವುದೇ ಈ ಚಿತ್ರದ ಕಥೆಯ ತಿರಳು.
ದಿಗಂತ್ ಹೊಸ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಧನ್ಯಾ ರಾಮ್ ಕುಮಾರ್ ಹಾಗೂ ಶರ್ಮಿಳಾ ಮಾಂಡ್ರೆ ಜೋಡಿಯಾಗಿದ್ದಾರೆ. ಇವರ ಜೊತೆ ರಂಗಾಯಣ ರಘು, ಅನಿರುದ್ಧ್ ಅಚಾರ್ಯ, ಗೋಪಾಲಕೃಷ್ಣ ದೇಶಪಾಂಡೆ, ರವಿಶಂಕರ್ ಗೌಡ, ನಾಗಭೂಷಣ್ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ.
ಕೆ.ಆರ್.ಜಿ ಸ್ಟೂಡಿಯೋಸ್ ಮತ್ತು ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ನ ಸಹಯೋಗದಲ್ಲಿ ಮೂಡಿ ಬಂದಿರುವ ಮೊದಲ ಚಿತ್ರ ಇದಾಗಿದೆ. ಚಿತ್ರ ನಿರ್ಮಾಣ ಹಾಗೂ ವಿತರಣಾ ಸಂಸ್ಥೆಯಾದ ಕೆ.ಆರ್.ಜಿ ಸ್ಟುಡಿಯೋಸ್ ವಿಭಿನ್ನ ಕಥಾವಸ್ತುವನ್ನು ಸಿನಿ ಪ್ರೇಕ್ಷಕರ ಮುಂದಿಡುವ ಗುರಿಯೊಂದಿಗೆ ಈಗಾಗಲೇ ಹಲವಾರು ಪ್ರಖ್ಯಾತ ಚಿತ್ರಗಳನ್ನು ನಿರ್ಮಿಸಿವೆ. ಇನ್ನು ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ ಹಲವಾರು ವೆಬ್ ಸೀರೀಸ್ಗಳ ಮೂಲಕ ತನ್ನದೇ ಛಾಪು ಮೂಡಿಸಿರುವ ಸಂಸ್ಥೆಯಾಗಿದ್ದು, ಇವರಿಬ್ಬರ ಸಹಯೋಗದಲ್ಲಿ ಮೂಡಿ ಬರಲು ಸಿದ್ಧಗೊಂಡಿದೆ ಈ 'ಪೌಡರ್'.
ಕೆ.ಆರ್.ಜಿ ಸ್ಟೂಡಿಯೋಸ್ನ ಮಾಲೀಕ ಕಾರ್ತಿಕ್ ಗೌಡ ಮತ್ತು ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ನ ಮಾಲೀಕ ಅರುನಭ್ ಕುಮಾರ್ ಮಾತನಾಡಿ, ಯುವಕರಿಗೆ, ಸಿನಿ ಪ್ರೇಕ್ಷಕರಿಗೆ ಹೊಸ ರೀತಿಯ ಕಥೆಗಳನ್ನು, ವಿಭಿನ್ನ ಕಥಾ ಹಂದರವನ್ನು ಹೊಂದಿರುವ ಚಿತ್ರಗಳನ್ನು ನೀಡುವುದು ನಮ್ಮ ಮುಖ್ಯ ಗುರಿಯಾಗಿದೆ. ಈ ನಿಟ್ಟಿನಲ್ಲಿ "ಪೌಡರ್" ನಮ್ಮ ಸಹಯೋಗದ ಚೊಚ್ಚಲ ಪ್ರಯತ್ನ. ʼಮಡ್ಗಾನ್ ಎಕ್ಸ್ ಪ್ರೆಸ್ʼ, ʼಫುಕ್ರೇ",ʼಗೋ ಗೋವಾ ಗಾನ್ʼ, ʼಡೆಲ್ಲಿ ಬೆಲ್ಲಿʼ ನಂತಹ ಹಾಸ್ಯ ಚಿತ್ರಗಳ ಅಭಿಮಾನಿಗಳಾಗಿ ಕನ್ನಡದಲ್ಲಿ ಅಂತಹದ್ದೇ ನಗೆ ಚಟಾಕಿಯನ್ನು ಹತ್ತಿಸುವ ಚಿತ್ರವನ್ನು ನಿರ್ಮಿಸಿದ್ದೇವೆ ಎಂದು ನಂಬಿದ್ದೇವೆ. ಚಿತ್ರವನ್ನು ನೋಡಿ ಪ್ರೇಕ್ಷಕರು ತಮ್ಮ ಹೊಟ್ಟೆ ಹುಣ್ಣಾಗುವಂತೆ ನಗುತ್ತಾರೆ ಎಂಬ ಭರವಸೆ ನಮಗಿದೆ. ಮುಂಬರುವ ದಿನಗಳಲ್ಲಿ ಇದೇ ರೀತಿಯ ಇನ್ನಷ್ಟು ವಿಭಿನ್ನ ಕಥೆಗಳನ್ನು ಈ ಸಹಯೋಗದ ಮೂಲಕ ಮುಂದಿಡಲು ಬಯಸುತ್ತೇವೆ.
ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ ಕುರಿತು:ಸಂಸ್ಥೆಯ ಸಂಸ್ಥಾಪಕ ಅರುನಭ್ ಕುಮಾರ್ ಸಾರಥ್ಯದಲ್ಲಿ, ತನ್ನ ಆರಂಭದ ದಿನದಿಂದಲೂ, ಉತ್ತಮ ಗುಣಮಟ್ಟದ ಕಥೆಗಳ ಮೂಲಕ ಟಿ.ವಿ.ಎಫ್ ಪ್ರೇಕ್ಷಕರನ್ನು ರಂಜಿಸುತ್ತಾ ಬಂದಿದೆ. ತನ್ನ 10 ವರ್ಷಗಳ ಪಯಣದಲ್ಲಿ, ಹಲವಾರು ಸ್ಟೀರಿಯೋ ಟೈಪ್ಗಳನ್ನು ಭೇದಿಸಿದೆ. ದಿ ವೈರಲ್ ಫೀವರ್ ಎಂಬ ಶೀರ್ಷಿಕೆಯೊಂದಿಗೆ ಸಾವಿರಾರು ಪ್ರೇಕ್ಷಕರ ಮನಮುಟ್ಟಿದೆ. ಈ ನಡುವೆ ಹಲವಾರು ನಿರ್ಮಾಣ ಸಂಸ್ಥೆಗಳು ಉಗಮವಾಗಿದ್ದರೂ, ಟಿ.ವಿ.ಎಫ್ ವೆಬ್ ಕಂಟೆಂಟ್ ಮೂಲಕ ತನ್ನದೇ ಆದ ಛಾಪನ್ನು ಮೂಡಿಸಿದೆ.
ಕೆ.ಆರ್.ಜಿ ಸ್ಟೂಡಿಯೋಸನ್ನು ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಸಾರಥ್ಯದಲ್ಲಿ 7 ವರ್ಷಗಳ ಹಿಂದೆ ಆರಂಭಗೊಂಡ ಈ ಸಂಸ್ಥೆ ವಿಭಿನ್ನ ಕಥಾವಸ್ತುವನ್ನು ಹೊಂದಿರುವ ಚಿತ್ರಗಳನ್ನು ಕನ್ನಡ ಪ್ರೇಕ್ಷಕರಿಗೆ ಕೊಡುಗೆಯಾಗಿ ನೀಡುತ್ತಾ ಬಂದಿದೆ. ತನ್ನ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಹಾಗೂ ಸಿನಿ ಪ್ರೇಕ್ಷಕರ ಮನದಲ್ಲಿ ಮನೆ ಮಾಡಿದೆ, ಮತ್ತು ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಸದ್ಯ ಟೀಸರ್ನಿಂದ ಗಮನ ಸೆಳೆಯುತ್ತಿರುವ ಪೌಡರ್ ಚಿತ್ರ ಜುಲೈ 12ರಂದು ಬಿಡುಗಡೆ ಆಗಲಿದೆ.
ಇದನ್ನೂ ಓದಿ:ಮೇ 24 ರಂದು ರವಿಚಂದ್ರನ್ ಅಭಿನಯದ 'ದ ಜಡ್ಜ್ ಮೆಂಟ್' ಚಿತ್ರ ಬಿಡುಗಡೆ - The Judgment Trailer