ಮಣಿ, ರಾಜೀವ ಹಾಗೂ ಇತ್ತೀಚೆಗೆ ತೆರೆಕಂಡಿರುವ 'ಪೆಪೆ' ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ಮಯೂರ್ ಪಟೇಲ್. ಇದೀಗ 'ತಮಟೆ' ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ.
ಮಯೂರ್ ಪಟೇಲ್ ನಿರ್ದೇಶಿಸಿರುವ ಈ ತಮಟೆ ಸಿನಿಮಾದಲ್ಲಿ ಮಯೂರ್ ತಂದೆ, ನಟ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮದನ್ ಪಟೇಲ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. "ತಮಟೆ" ಚಿತ್ರದ ಶೋ ರೀಲ್ ಬಿಡುಗಡೆ ಕಾರ್ಯಕ್ರಮವನ್ನು ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಹಮ್ಮಿಕೊಳ್ಳಲಾಗಿತ್ತು. ಡಿಸಿಎಂ ಡಿ.ಕೆ ಶಿವಕುಮಾರ್ ಆಗಮಿಸಿ ಚಿತ್ರದ ಶೋ ರೀಲ್ ನೋಡಿದರು.
'ತಮಟೆ' ಚಿತ್ರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಾಥ್ (Photo source: ETV Bharat) ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ನಮ್ಮ ದೇಶದ, ಅದರಲ್ಲೂ ನಮ್ಮ ಕರ್ನಾಟಕದ ಗ್ರಾಮೀಣ ಭಾಗದ ಬದುಕು, ಕಲೆ, ಸಂಸ್ಕೃತಿ ಸೇರಿದಂತೆ ಶೋಷಿತ ಜನಾಂಗದ ಬದುಕನ್ನು ತಮಟೆ ಚಿತ್ರದ ಮೂಲಕ ತೆರೆಯ ಮೇಲೆ ತರಲಾಗಿದೆ. ಈ ಮೂಲಕ ನಮ್ಮೆಲ್ಲರ ಆಲೋಚನೆಗಳನ್ನು ಮರು ಚಿಂತನೆಗೆ ಒಳಪಡಿಸಲಾಗಿದೆ ಎಂದು ಅಭಿಪ್ರಾಯಪಟ್ಟರು.
ಹಾಗೇ ನಾನು ಈ ಹಿಂದೆ ಟೂರಿಂಗ್ ಟಾಕೀಸ್ ನಡೆಸುತ್ತಿದ್ದೆ. ಈಗ ಚಲನಚಿತ್ರ ಪ್ರದರ್ಶನಕ್ಕಾಗಿಯೇ 21 ಪರದೆಗಳನ್ನು ನಮ್ಮ ಕುಟುಂಬ ಹೊಂದಿದೆ. ಆದರೂ ಒಮ್ಮೆಯೂ ಒಟ್ಟಿಗೆ ಕುಳಿತು ಚಲನಚಿತ್ರ ನೋಡಲು ಆಗಿಲ್ಲ. ಆದರೆ 25 ವರ್ಷಗಳ ನಂತರ 'ತಮಟೆ' ಚಿತ್ರದ ತುಣುಕುಗಳನ್ನು ಅರ್ಧ ಗಂಟೆ ವೀಕ್ಷಿಸಿದೆ ಎಂದರು.
'ತಮಟೆ' ಚಿತ್ರಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಸಾಥ್ (Photo source: ETV Bharat) ಈ ದೇಶದ ಆಸ್ತಿಯೇ ನಮ್ಮ ಸಂಸ್ಕೃತಿ. ಪ್ರತೀ ಊರು, ನಾಡ ಹಬ್ಬ ಆಚರಣೆಯಲ್ಲೂ ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿ ನೀಡಲಾಗಿರುತ್ತದೆ. ಕೊಂಡ ಹಾಯುವುದು, ತಮಟೆ ನುಡಿಸುವುದು ಹೀಗೆ ಹಲವು. ಆದ್ರೆ ಇದನ್ನು ನೋಡುವ ಭಕ್ತರು ನೂರಾರು ಮಂದಿ. ಐದು ಬೆರಳು ಸೇರಿದಾಗ ಮಾತ್ರ ಮುಷ್ಠಿಗೆ ಶಕ್ತಿ ಬರುತ್ತದೆ. ಇದೇ ರೀತಿ ಎಲ್ಲರೂ ಸೇರಿದಾಗ ಮಾತ್ರ ಸಮಾಜ ಬಲಿಷ್ಠವಾಗುತ್ತದೆ. ತಮಟೆ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಶೋಷಿತ ಸಮುದಾಯದ ಕಥೆಯನ್ನು ಚೆನ್ನಾಗಿ ಹೇಳಿದ್ದಾರೆ. ಈಗ ಬದುಕು ಸ್ವಲ್ಪ ಸುಧಾರಣೆಯಾಗುತ್ತಿದೆ ಎನ್ನಬಹುದು. ಮಯೂರ್ ಪಟೇಲ್ ಅವರು ಸಮುದಾಯದ ಹಿಂದಿನ ಸ್ಥಿತಿಗತಿಗಳನ್ನು ಚೆನ್ನಾಗಿ ಹೇಳಿದ್ದಾರೆ. ನನಗೆ ತಮಟೆಯ ಶಕ್ತಿ ಗೊತ್ತಿದೆ. ಕನಕಪುರದಲ್ಲಿ ನಾವು ಆಯೋಜಿಸುವ ಕನಕೋತ್ಸದಲ್ಲಿ, ಜಿಲ್ಲೆಯ ಎಲ್ಲಾ ತಮಟೆ ಕಲಾವಿದರನ್ನು ಸೇರಿಸಿ ಅವರಿಗೆ ಸ್ಪರ್ಧೆ ಆಯೋಜಿಸಿ, ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಾ ಬಂದಿದ್ದೇವೆ ಎಂದು ಡಿಕೆಶಿ ತಿಳಿಸಿದರು.
ಇದನ್ನೂ ಓದಿ:ಬಿಗ್ ಬಾಸ್ ಬಿಟ್ಟು ಹೋಗಲ್ಲವೆಂದ ಜಗದೀಶ್: ನಾಮಿನೇಷನ್‍ನಿಂದ ಸೇಫ್ ಆಗೋರು ಯಾರು?
ಮದನ್ ಪಟೇಲ್ ಅವರು ಹಲವು ವರ್ಷಗಳಿಂದ ಕಲಾ ಸೇವೆ ಮಾಡಿಕೊಂಡು ಬಂದಿದ್ದಾರೆ. ಅವರ ಮಗ ಚೆನ್ನಾಗಿ ತಮಟೆ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ ಎನಿಸುತ್ತಿದೆ. ಮುಂದೊಂದು ದಿನ ಸಂಪೂರ್ಣ ಚಿತ್ರವನ್ನು ವೀಕ್ಷಣೆ ಮಾಡುತ್ತೇನೆಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.
ಇದನ್ನೂ ಓದಿ:ರಜನಿಕಾಂತ್ 'ವೆಟ್ಟೈಯನ್' ಬಿಡುಗಡೆ: ಚಿತ್ರಮಂದಿರಗಳೆದುರು ಸಂಭ್ರಮಾಚರಣೆ ಜೋರು - ವಿಡಿಯೋ ನೋಡಿ
ತಮಟೆ ಚಿತ್ರಕ್ಕೆ ಮದನ್ ಪಟೇಲ್ ಕಥೆ ಬರೆದಿದ್ದು, ಅವರ ಮಗ ಮಯೂರ್ ಪಟೇಲ್ ನಿರ್ದೇಶನ ಮಾಡಿದ್ದಾರೆ. ಗ್ರಾಮೀಣ ಭಾಗದ ಬದುಕು, ಕಲೆ, ಸಂಸ್ಕೃತಿ ಕಥೆ ಹೊಂದಿರುವ ಈ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.