ಕರ್ನಾಟಕ

karnataka

ETV Bharat / entertainment

'ನ್ಯಾಯದ ಮೇಲೆ ಭರವಸೆಯಿಡೋಣ': ಅಭಿಮಾನಿಗಳಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀ ಮನವಿ - Vijayalakshmi Darshan

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ ಜೈಲು ಸೇರಿದ್ದಾರೆ. ಇದು ಅವರ ಕುಟುಂಬ ಮತ್ತು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಈ ಕುರಿತು ದರ್ಶನ್​ ಪತ್ನಿ ವಿಜಯಲಕ್ಷ್ಮೀ ಈಗ ಪತಿ ಪರ ನಿಂತಿದ್ದಾರೆ. ಶಾಂತಿಯಿಂದಿರೋಣ, ನ್ಯಾಯಾಲಯಗಳ ಮೇಲೆ ವಿಶ್ವಾಸವಿಡೋಣ ಎಂದು ಅಪಾರ ಸಂಖ್ಯೆಯ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

Vijayalakshmi - Darshan
ವಿಜಯಲಕ್ಷ್ಮೀ - ದರ್ಶನ್ ದಂಪತಿ (ETV Bharat- File Photo)

By ETV Bharat Karnataka Team

Published : Jun 27, 2024, 1:06 PM IST

ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಬೇಡಿಕೆ ಹೊಂದಿರುವ ನಟ ದರ್ಶನ್​ ಅವರೀಗ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಹಲ್ಲೆ, ಹತ್ಯೆ ಆರೋಪದಡಿ ಜೈಲುವಾಸ ಅನುಭವಿಸುತ್ತಿರುವ ದರ್ಶನ್ ಪರವಾಗಿ ಪತ್ನಿ ವಿಜಯಲಕ್ಷ್ಮೀ ನಿಂತಿದ್ದಾರೆ.

ವಿಜಯಲಕ್ಷ್ಮೀ ಕೆಲ ದಿನಗಳ ಹಿಂದೆ ಮಗ ವಿನೀಶ್ ಜೊತೆ ಪರಪ್ಪನ ಅಗ್ರಹಾರದಲ್ಲಿರುವ ಪತಿ ದರ್ಶನ್ ಅವರನ್ನು ನೋಡಲು ಹೋಗಿದ್ದರು. ಎರಡು ಗಂಟೆಗೂ ಹೆಚ್ಚು ದರ್ಶನ್ ಜೊತೆ ಈ ಘಟನೆ ಬಗ್ಗೆ ಮಾತನಾಡಿ ಧೈರ್ಯ ತುಂಬಿ ಬಂದಿದ್ದರು‌. ಮತ್ತೊಂದೆಡೆ, ಸೋಷಿಯಲ್ ಮೀಡಿಯಾದಲ್ಲಿ ದರ್ಶನ್​ ಪ್ರಕರಣದ ಬಗ್ಗೆ ಪರ - ವಿರೋಧ ಚರ್ಚೆ ಮುಂದುವರಿದಿದೆ. ಇದರ ಬೆನ್ನಲ್ಲೇ ವಿಜಯಲಕ್ಷ್ಮೀ ಸೋಷಿಯಲ್ ಮೀಡಿಯದಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿ ಅಭಿಮಾನಿಗಳಲ್ಲೊಂದು ಮನವಿ ಮಾಡಿಕೊಂಡಿದ್ದಾರೆ.

ದರ್ಶನ್ ಕೈ ಹಿಡಿದಿರುವಂತೆ ತೋರುತ್ತಿರುವ ಅಭಿಮಾನಿ ಬಳಗದ ಪೋಸ್ಟರ್ ಶೇರ್ ಮಾಡಿದ್ದಾರೆ. ಜೊತೆಗೆ, ''ನನ್ನ ಪ್ರೀತಿಯ ಸಹೋದರರೇ, ದರ್ಶನ್ ಅವರಿಗೆ ನೀವು, ತಮ್ಮ ಅಭಿಮಾನಿಗಳು ಎಂದರೆ ಅಪಾರವಾದ ಪ್ರೀತಿ. ನೀವು ಅವರನ್ನು ಪ್ರೀತಿಸುವಷ್ಟೇ ಅವರು ತಮ್ಮ ಸೆಲೆಬ್ರಿಟಿಗಳನ್ನು ತಮ್ಮ ಹೃದಯದಲ್ಲೇ ಹೊತ್ತಿರುವುದು ನಿಮಗೆ ಗೊತ್ತಿದೆ. ಇದೊಂದು ಪರೀಕ್ಷೆಯ ಸಮಯ. ನನಗೆ, ನಿಮಗೆ, ನಮ್ಮೆಲ್ಲರಿಗೆ. ನಾವು ತಾಳ್ಮೆ ಕಳೆದುಕೊಂಡು ಮಾತನಾಡುವುದರಿಂದ ಹಾನಿಯಾಗುವುದು ನಮಗೆ. ಆದ್ದರಿಂದ ತಾಳ್ಮೆ, ಶಾಂತಿಯಿಂದಿರೋಣ. ನಿಮ್ಮ ಆತಂಕವನ್ನು ನಾನು, ದರ್ಶನ್ ಅವರಿಗೆ ತಲುಪಿಸಿದ್ದೇನೆ. ಅವರೂ ನಿಮ್ಮ ಬಗ್ಗೆ ಪ್ರೀತಿ ಕಾಳಜಿ ವ್ಯಕ್ತಪಡಿಸಿದ್ದಾರೆ''.

ಇದನ್ನೂ ಓದಿ:'ದರ್ಶನ್ ನಾಚಿಕೆ ಸ್ವಭಾವದ ವ್ಯಕ್ತಿ, ವಿವಾದಗಳು ಹೊಸತೇನಲ್ಲ': ನಟಿ ಭಾವನಾ ರಾಮಣ್ಣ - Bhavana Ramanna on Darshan Case

''ನಾವು ನಮ್ಮ ನ್ಯಾಯಾಲಯಗಳ ಮೇಲೆ ವಿಶ್ವಾಸವಿಡೋಣ. ನಮಗೆ ನ್ಯಾಯ ಸಿಗುವ ಸಂಪೂರ್ಣ ಭರವಸೆ ನನಗಿದೆ. ಇಂತಹ ಕಷ್ಟದ ಸಮದಲ್ಲಿ, ದರ್ಶನ್​ರ ಅನುಪಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಅವರಿಗೆ ಕೇಡು ಬಯಸುವವರ ಬಗ್ಗೆ ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ. ಒಳ್ಳೆಯ ಸಮಯ ಮತ್ತೆ ಮರಳಿ ಬರಲಿದೆ. ಸತ್ಯಮೇವ ಜಯತೆ'' ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:ರೇಣುಕಾಸ್ವಾಮಿ ಕುಟುಂಬದ ಬೆಂಬಲಕ್ಕೆ ನಿಂತ ಧ್ರುವ ಸರ್ಜಾ ಅಭಿಮಾನಿಗಳು - Dhruva Sarja Fans

ABOUT THE AUTHOR

...view details