ಈಶ್ವರ್ ಕಾರ್ತಿಕ್ ನಿರ್ದೇಶನದ ಬಹುತಾರಾಗಣದ 'ಜೀಬ್ರಾ' ಸಿನಿಮಾ ಅನೌನ್ಸ್ ಆಗಿದ್ದು ನಿಮಗೆ ತಿಳಿದೇ ಇದೆ. ಈ ಸಿನಿಮಾದಲ್ಲಿ ಸತ್ಯದೇವ್ ನಾಯಕನಾಗಿ ನಟಿಸುತ್ತಿದ್ದಾರೆ. ಮಾತ್ರವಲ್ಲ, ಸ್ಯಾಂಡಲ್ವುಡ್ನ ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದು ವಿಶೇಷ. ಡಾಲಿ ಧನಂಜಯ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಈ ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾದ ಪೋಸ್ಟರ್ ಅನಾವರಣಗೊಂಡಿದೆ. ಇತ್ತೀಚೆಗೆ ಸತ್ಯದೇವ್ ಅವರ ಹುಟ್ಟುಹಬ್ಬದ ಸಂದರ್ಭ ಚಿತ್ರತಂಡ ಫಸ್ಟ್ ಲುಕ್ ರಿವೀಲ್ ಮಾಡಿದೆ.
ಈ ಚಿತ್ರವನ್ನು ಪದ್ಮಜಾ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಓಲ್ಡ್ ಟೌನ್ ಪಿಕ್ಚರ್ಸ್ ಬ್ಯಾನರ್‌ಗಳ ಅಡಿ ಎಸ್‌ಎನ್ ರೆಡ್ಡಿ, ಎಸ್ ಪದ್ಮಜಾ, ಬಾಲ ಸುಂದರಂ ಮತ್ತು ದಿನೇಶ್ ಸುಂದರಂ ನಿರ್ಮಾಣ ಮಾಡುತ್ತಿದ್ದಾರೆ. ಇದೀಗ ಜೀಬ್ರಾ ತಂಡ ಫಸ್ಟ್ ಲುಕ್ ಅನಾವರಣಗೊಳಿಸಿದೆ.
ಪೋಸ್ಟರ್‌ನಲ್ಲಿ ಸತ್ಯದೇವ್ ಸ್ಟೈಲಿಶ್ ಅವತಾರ ತಾಳಿದ್ದಾರೆ. ಸೂಟ್ ಧರಿಸಿ ಅತ್ಯಂತ ಖಡಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಭುಜದ ಮೇಲೆ ಚೀಲ ಹೊತ್ತು ಗಂಭೀರವಾಗಿ ಹೆಜ್ಜೆ ಹಾಕಿದ್ದಾರೆ. ಇನ್ನೊಂದು ಕೈಯಲ್ಲಿ ಪೆನ್ ಇದೆ. ಪೋಸ್ಟರ್ ಬ್ಯಾಕ್‌ರೌಂಡ್‌ನಲ್ಲಿ ನೋಟುಗಳು ಚೆಲ್ಲಾಪಿಲ್ಲಿಯಾಗಿವೆ.
ಜೀಬ್ರಾ ಸಿನಿಮಾದಲ್ಲಿ ಡಾಲಿ ಧನಂಜಯ್ ಜೊತೆಗೆ ಸತ್ಯದೇವ್, ನಟಿ ಅಮೃತಾ ಐಯ್ಯಂಗಾರ್, ಪ್ರಿಯಾ ಭವಾನಿ ಶಂಕರ್, ತೆಲುಗಿನ ಜನಪ್ರಿಯ ಹಾಸ್ಯನಟ ಸುನಿಲ್, ಕಟ್ಟಪ್ಪ ಖ್ಯಾತಿಯ ಸತ್ಯರಾಜ್, ಊರ್ವಶಿ ರೌಟೇಲಾ ಸೇರಿದಂತೆ ಇನ್ನೂ ಕೆಲ ಪ್ರತಿಭಾವಂತ ನಟರು ಇರಲಿದ್ದಾರೆ. ಸಿನಿಮಾವನ್ನು ಈಶ್ವರ್ ಕಾರ್ತಿಕ್ ನಿರ್ದೇಶನ ಮಾಡಿದ್ದು, ಕಥೆ ಮತ್ತು ಚಿತ್ರಕಥೆ ಅವರದ್ದೇ.