ಬೆಂಗಳೂರು: ಹೊಸ ಪ್ರತಿಭೆಗಳಿಂದ ಸಿದ್ಧಗೊಂಡಿರುವ ವಿಭಿನ್ನ ಕಥಾನಕದ ಚಿತ್ರ 'ಕೆಂಡ'. ಆಕರ್ಷಕ ಟೈಟಲ್ ನಿಂದಲೇ ಸದ್ಯ ಚಿತ್ರ ಎಲ್ಲರ ಗಮನ ಸೆಳೆಯುತ್ತಿದ್ದು, ಸದ್ಯ ತೆರೆ ಕಾಣಲು ಸಜ್ಜಾಗಿದೆ. ಮೋಷನ್ ಪೋಸ್ಟರ್ ಹಾಗೂ ಟೀಸರ್ ನಿಂದ ಹೆಚ್ಚು ಗಮನ ಸೆಳೆಯುತ್ತಿರುವ ಕೆಂಡ ಚಿತ್ರದ ಆಡಿಯೋ ಇದೀಗ ಒಳ್ಳೆ ಮೊತ್ತಕ್ಕೆ ಮಾರಾಟಗೊಂಡಿದೆ.
ಈ ಚಿತ್ರದ ಮೂಲಕ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಅವರ ಪುತ್ರ ರಿತ್ವಿಕ್ ಕಾಯ್ಕಿಣಿ ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಅವರ ಸಂಗೀತ ನೀಡಿರುವ ಹಾಡುಗಳ ಆಡಿಯೋ ರೈಟ್ಸ್ ಅನ್ನು 'ಡಿ ಬೀಟ್ಸ್' ಪಡೆದುಕೊಂಡಿದೆ. ಸಿನಿಮಾ ಮ್ಯೂಸಿಕ್ ವಲಯದಲ್ಲಿ ಈಗಾಗಲೇ ಡಿ ಬೀಟ್ಸ್ ಹೆಸರುಗಳಿಸಿದ್ದು. ಖುದ್ದು ಸಂಗೀತ ನಿರ್ದೇಶಕ ಕಂ ಈ ಸಂಸ್ಥೆಯ ಮುಖ್ಯಸ್ಥರಾದ ವಿ. ಹರಿಕೃಷ್ಣ ಅವರೇ ಕೆಂಡದ ಹಾಡುಗಳನ್ನು ಕೇಳಿ, ಬಹುವಾಗಿ ಮೆಚ್ಚಿಕೊಂಡು ಆಡಿಯೋ ಹಕ್ಕುಗಳನ್ನು ಖರೀದಿಸಿದ್ದಾರೆ. ಹರಿಕೃಷ್ಣ ಆಪ್ತರ ಪ್ರಕಾರ 15ರಿಂದ 25 ಲಕ್ಷ ರೂಪಾಯಿಗೆ ಕೆಂಡ ಚಿತ್ರದ ಆಡಿಯೋ ರೈಟ್ಸ್ ಮಾರಾಟ ಆಗಿದೆಯಂತೆ.
ಸಹದೇವ್ ಕೆಲವಡಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿನಿಮಾ ಕೆಂಡ. ಚಿತ್ರದ ಕಡೆಯಿಂದ ಹಂತ ಹಂತವಾಗಿ ಒಂದಷ್ಟು ಅಚ್ಚರಿಯ ಸುದ್ದಿಗಳು ಜಾಹೀರಾಗುತ್ತಲೇ ಬರುತ್ತಿವೆ. 'ಗಂಟುಮೂಟೆ' ಖ್ಯಾತಿಯ ರೂಪಾ ರಾವ್ ಚಿತ್ರ ನಿರ್ಮಾಣ ಮಾಡಿದ್ದಾರೆ.