ಮುಂಬೈ :ಬಾಲಿವುಡ್ ನಟರಿಗೆ ಬೆದರಿಕೆಗಳು ಹೆಚ್ಚಾಗುತ್ತಿರುವ ಮಧ್ಯೆ ಹಾಸ್ಯ ಕಲಾವಿದ ಕಪಿಲ್ ಶರ್ಮಾ ಮತ್ತು ನಟ ರಾಜ್ಪಾಲ್ ಯಾದವ್ ಅವರಿಗೆ ಇಮೇಲ್ ಮೂಲಕ ಬೆದರಿಕೆ ಸಂದೇಶ ಬಂದಿದೆ.
ಶರ್ಮಾ ಅವರಿಗೆ ಬಂದ ಇಮೇಲ್ ಬೆದರಿಕೆ ಕರೆಯಲ್ಲಿ, ನಿಮ್ಮ ಇತ್ತೀಚಿನ ಚಟುವಟಿಕೆಗಳನ್ನು ನಾವು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಸೂಕ್ಷ್ಮ ವಿಚಾರಗಳನ್ನು ನಿಮ್ಮ ಗಮನಕ್ಕೆ ತರುವುದು ಮುಖ್ಯವಾಗಿದೆ. ಸಾರ್ವಜನಿಕ ಪ್ರಚಾರ ಅಥವಾ ನಿಮಗೆ ಕಿರುಕುಳ ನೀಡುವ ಉದ್ದೇಶವನ್ನು ನಾವು ಹೊಂದಿಲ್ಲ. ಗಂಭೀರವಾಗಿ ಮತ್ತು ಗೌಪ್ಯತೆಯೊಂದಿಗೆ ಈ ಬೆದರಿಕೆ ಸಂದೇಶವನ್ನು ಪರಿಗಣಿಸುವಂತೆ ತಿಳಿಸಲಾಗಿದೆ. ಈ ಇಮೇಲ್ ಕೆಳಗೆ ಬಿಷ್ಣು ಎಂದು ಸಹಿ ಕೂಡ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವರದಿ ಪ್ರಕಾರ ಈ ಸಂದೇಶ ಪಾಕಿಸ್ತಾನದಿಂದ ಬಂದಿದೆ.
ಇನ್ನು, ಹಾಸ್ಯ ನಟ ರಾಜ್ಪಾಲ್ ಯಾದವ್ಗೂ ಬಿಷ್ಣು ಸಹಿಯೊಂದಿಗೆ ಬೆದರಿಕೆ ಬಂದಿದ್ದು, 8 ತಾಸಿನೊಳಗೆ ಇದಕ್ಕೆ ಉತ್ತರಿಸಬೇಕು ಅಥವಾ ಸಮಸ್ಯೆ ಎದುರಿಸಲು ಸಿದ್ಧವಾಗಬೇಕು ಎಂಬ ಎಚ್ಚರಿಕೆ ನೀಡಲಾಗಿದೆ.
2024ರ ಡಿಸೆಂಬರ್ 14 ರಂದು ಈ ಸಂದೇಶ ಬಂದಿದ್ದು, ಈ ಸಂಬಂಧ ಅಂಬೋಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಪೊಲೀಸರು ಈ ಬೆದರಿಕೆ ಸಂದೇಶ ಕುರಿತು ತನಿಖೆ ನಡೆಸಿದ್ದು, ಯಾರಿಂದ ಈ ಸಂದೇಶ ಬಂದಿದೆ ಎಂಬುದು ಇನ್ನೂ ಪತ್ತೆಯಾಗಿಲ್ಲ.