ಚಿತ್ರರಂಗದಲ್ಲಿ ಸ್ಟಾರ್ ಕಲಾವಿದರ ಜೊತೆ ಜೊತೆಗೆ ನವ ಪ್ರತಿಭೆಗಳ ಸಿನಿಮಾಗಳೂ ಕೂಡ ಗಮನ ಸೆಳೆಯುತ್ತಿವೆ. ಇದೀಗ ವಿಭಿನ್ನ ಶೀರ್ಷಿಕೆಯಿಂದ ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆಯುತ್ತಿರುವ ಸಿನಿಮಾ 'ಚೌ ಚೌ ಬಾತ್'. ನಿರ್ದೇಶಕರಿಂದ ಹಿಡಿದು ನಟ-ನಟಿಯರವರೆಗೂ ಹೊಸಬರಿಂದ ಕೂಡಿರುವ ಈ ಚಿತ್ರದ ಶೂಟಿಂಗ್ ಪೂರ್ಣಗೊಂಡಿದ್ದು, ಬಿಡುಗಡೆಗೆ ಸಜ್ಜಾಗಿದೆ.
'ಚೌ ಚೌ ಬಾತ್' ಟ್ರೇಲರ್ ರಿಲೀಸ್: ಚೌ ಚೌ ಬಾತ್ ಕನ್ನಡದ ಮಟ್ಟಿಗೆ ಅನೇಕ ಹೊಸತನಗಳನ್ನು ಹೊಂದಿರುವ ಸಿನಿಮಾವಂತೆ. ಕನ್ನಡದ ಮೊಟ್ಟ ಮೊದಲ ಹೈಪರ್ ಲಿಂಕ್ ರೋಮ್-ಕಾಮ್ ಮಾದರಿಯ ಚಿತ್ರ ಎಂಬುದು ಚಿತ್ರತಂಡದ ಮಾತು. ಸದ್ಯ ಅಧಿಕೃತ ಟ್ರೇಲರ್ ಅನಾವರಣಗೊಂಡಿದೆ. ನಿರ್ಮಾಪಕ ಸತೀಶ್ ಎಸ್.ಬಿ ತಮ್ಮ ಪತ್ನಿಯೊಂದಿಗೆ ಟ್ರೇಲರ್ ಬಿಡುಗಡೆಗೊಳಿಸಿದ್ದಾರೆ.
ಚಿತ್ರತಂಡ ಹೀಗಿದೆ: ಟ್ರೇಲರ್ ಈ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಸಿನಿಮಾ ವೀಕ್ಷಿಸುವ ವೀಕ್ಷಕರ ಕುತೂಹಲ ಹೆಚ್ಚಳಗೊಂಡಿದೆ. ನಿರ್ದೇಶಕ ಕೇಂಜ ಚೇತನ್ ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಹೊಸ ಪ್ರತಿಭೆಗಳಾದ ಸಾಗರ್ ಗೌಡ, ಸಂಕಲ್ಪ್ ಶರ್ಮಾ, ಸುಶ್ಮಿತಾ ಭಟ್, ಅರುಣಾ ಬಾಲರಾಜ್, ಧನುಶ್ ಬೈಕಂಪಾಡಿ, ಗೀತಾ ಬಂಗೇರ, ಪ್ರಕರ್ಷ ಶಾಸ್ತ್ರಿ ಸೇರಿದಂತೆ ಹಲವರ ತಾರಾಬಳಗ ಒಳಗೊಂಡಿದೆ.
ಇದನ್ನೂ ಓದಿ:ಚಿರಂಜೀವಿಗೆ 'ಪದ್ಮವಿಭೂಷಣ': ಧನ್ಯವಾದ ಅರ್ಪಿಸಿದ ಮೆಗಾಸ್ಟಾರ್
ಸನಾತನಯ್ ಪಿಕ್ಚರ್ಸ್ ಮತ್ತು ಕಾಮಧೇನು ಫಿಲ್ಮ್ಸ್ ಅರ್ಪಿಸುವ ಈ ಚಿತ್ರ ಹಾರಿಜಾನ್ ಮೂವೀಸ್ ಬ್ಯಾನರ್ ಅಡಿ ನಿರ್ಮಾಣಗೊಂಡಿದೆ. ಹೇಮಂತ್ ಜೋಯಿಸ್ ಸಂಗೀತ ನಿರ್ದೇಶನ, ರುದ್ರಮೂರ್ತಿ ಬೆಳಗೆರೆ ಛಾಯಾಗ್ರಹಣ, ಪ್ರಮೋದ್ ಮರವಂತೆ ಗೀತ ಸಾಹಿತ್ಯವಿರುವ ಈ ಚಿತ್ರದ ಸಂಕಲನದ ಜವಾಬ್ದಾರಿಯನ್ನು ಖುದ್ದು ನಿರ್ದೇಶಕ ಕೇಂಜ ಚೇತನ್ ಕುಮಾರ್ ಅವರೇ ನಿಭಾಯಿಸಿದ್ದಾರೆ.
ಇದನ್ನೂ ಓದಿ:ಸಂಗೀತ ಮಾಂತ್ರಿಕ ಇಳಯರಾಜರ ಪುತ್ರಿ ಭವತಾರಿಣಿ ಕ್ಯಾನ್ಸರ್‌ನಿಂದ ನಿಧನ
ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ 'ಬಿಗ್ ಬಾಸ್ ಸೀಸನ್ 10'ರ ವೈಲ್ಡ್ ಕಾರ್ಡ್ ಸ್ಪರ್ಧಿ ಅವಿನಾಶ್ ಶೆಟ್ಟಿ ಸಾಕ್ಷಿಯಾಗಿದ್ದರು. ಇನ್ನುಳಿದಂತೆ ಗೀತಸಾಹಿತಿ ಪ್ರಮೋದ್ ಮರವಂತೆ, ಸಂಗೀತ ನಿರ್ದೇಶಕ ಹೇಮಂತ್ ಜೋಯಿಸ್, ಛಾಯಾಗ್ರಾಹಕ ರುದ್ರಮೂರ್ತಿ ಬೆಳಗೆರೆ, ಸಾಗರ್ ಗೌಡ, ಪ್ರಕರ್ಷ ಶಾಸ್ತ್ರಿ, ಗೀತಾ ಬಂಗೇರ, ಹರ್ಷವರ್ಧನ್, ಪ್ರಸಾದ್, ನಿಶಾಂತ್ ಶೆಟ್ಟಿ ಸೇರಿದಂತೆ ಇಡೀ ಚಿತ್ರತಂಡ ಕಾರ್ಯಕ್ರಮದಲ್ಲಿ ಉಪಸ್ಥಿತವಿತ್ತು. ಸತೀಶ್ ಎಸ್.ಬಿ, ಸಂಕಲ್ಪ್ ಶರ್ಮಾ, ಪೂರ್ಣಚಂದ್ರ, ದ ಜೋಯ್ಸ್ ಪ್ರಾಜೆಕ್ಟ್, ಅಶೋಕ್ ಡಿ ಶೆಟ್ಟಿ, ಓಂ ಸ್ಟುಡಿಯೋ ಸಹ ನಿರ್ಮಾಣದೊಂದಿಗೆ ಚೌ ಚೌ ಬಾತ್ ಚಿತ್ರ ನಿರ್ಮಾಣಗೊಂಡಿದ್ದು, ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ. ವಿಭಿನ್ನ ಕಥಾಹಂದರಗಳುಳ್ಳ ಸಿನಿಮಾಗಳು ಪ್ರೇಕ್ಷಕರನ್ನು ತಲುಪುತ್ತಿವೆ. ಅದೇ ರೀತಿ ಚೌ ಚೌ ಬಾತ್ ಕೂಡ ನಿರ್ಮಾಣಗೊಂಡಿದ್ದು, ಎಷ್ಟರ ಮಟ್ಟಿಗೆ ಯಶಸ್ವಿ ಆಗಲಿದೆ ಎನ್ನೋದನ್ನು ಕಾದು ನೋಡಬೇಕಿದೆ.