ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ 'ಕೃಷ್ಣಂ ಪ್ರಣಯ ಸಖಿ' ಚಿತ್ರದ 'ಚಿನ್ನಮ್ಮ' ಹಾಡು ಇತ್ತೀಚಿಗೆ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಯಿತು. ಸುಪ್ರೀಂ ಹೀರೋ ಶಶಿಕುಮಾರ್ ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಶ್ರೀನಿವಾಸರಾಜು ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ, ಒಂಭತ್ತು ಜನ ಸುಂದರ ಹುಡುಗಿಯರೊಂದಿಗೆ ಗಣೇಶ್ ರೊಮ್ಯಾನ್ಸ್ ಮಾಡಲಿದ್ದಾರೆ. ಶಶಿಕುಮಾರ್ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ.
ಹಾಡು ಬಿಡುಗಡೆ ಬಳಿಕ ಮಾತನಾಡಿದ ಗಣೇಶ್, ಕವಿರಾಜ್ ಬರೆದಿರುವ 'ಚಿನ್ನಮ್ಮ' ಹಾಡು ತುಂಬಾ ಚೆನ್ನಾಗಿದೆ. ಅರ್ಜುನ್ ಜನ್ಯ ಅವರ ಸಂಗೀತ, ಕೈಲಾಶ್ ಖೇರ್ ಹಾಗೂ ಇಂದು ನಾಗರಾಜ್ ಅವರ ಗಾಯನ ಮತ್ತು ಶೇಖರ್ ಮಾಸ್ಟರ್ ಅವರ ನೃತ್ಯ ನಿರ್ದೇಶನ ಹಾಗೂ ವೆಂಕಟ್ ರಾಮಪ್ರಸಾದ್ ಅವರ ಛಾಯಾಗ್ರಹಣ ಎಲ್ಲವೂ ಸೊಗಸಾಗಿದೆ. ಈ ಹಾಡು ಚಿತ್ರೀಕರಣವಾದ ಜಾಗ ಕೂಡ ಅದ್ಭುತವಾಗಿದೆ. ಈ ಚಿತ್ರದಲ್ಲಿ ಹಿರಿಯ ನಟ ಶಶಿಕುಮಾರ್ ಅವರ ಜೊತೆ ನಟಿಸಿದ್ದು ಖುಷಿಯಾಗಿದೆ ಎಂದರು.
ನಂತರ ನಿರ್ದೇಶಕ ಶ್ರೀನಿವಾಸರಾಜು ಮಾತನಾಡಿ, ಅರ್ಜುನ್ ಜನ್ಯ ಅವರು ಸಂಗೀತ ಸಂಯೋಜಿಸಿರುವ ಒಟ್ಟು 7 ಹಾಡುಗಳಿದೆ. 'ಚಿನ್ನಮ್ಮ' ಎರಡನೇ ಹಾಡು. ಮೈಸೂರಿನಲ್ಲಿ ಬಿಡುಗಡೆಯಾದ ಮೊದಲ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಈ 'ಚಿನ್ನಮ್ಮ' ಹಾಡು ಕೂಡ ಎಲ್ಲರಿಗೂ ಪ್ರಿಯವಾಗಲಿದೆ ಎಂದರು.