ಲಕ್ಷ್ಮಣ್ ಉಟೇಕರ್ ನಿರ್ದೇಶನದ ಐತಿಹಾಸಿಕ ಚಿತ್ರ 'ಛಾವಾ' ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಂಡು 10 ದಿನಗಳನ್ನು ಪೂರೈಸಿದೆ. ಫೆಬ್ರವರಿ 14 ರಂದು ತೆರೆಕಂಡ 2025ರ ಬಹುನಿರೀಕ್ಷಿತ ಸಿನಿಮಾ ಮೊದಲ ದಿನದಿಂದಲೂ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ವ್ಯವಹಾರ ನಡೆಸುತ್ತಿದೆ. ಚಿತ್ರದಲ್ಲಿ ಬಾಲಿವುಡ್ ನಟ ವಿಕ್ಕಿ ಕೌಶಲ್ ಛತ್ರಪತಿ ಶಿವಾಜಿ ಮಹಾರಾಜರ ಪುತ್ರ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಸಂಭಾಜಿ ಮಹಾರಾಜ್ ಪತ್ನಿ ಯೇಸುಬಾಯಿ ಭೋಸಲೆ ಪಾತ್ರ ನಿರ್ವಹಿಸಿದ್ದಾರೆ. ಅಕ್ಷಯ್ ಖನ್ನಾ ಮೊಘಲ್ ಚಕ್ರವರ್ತಿ ಔರಂಗಜೇಬನ ರೋಲ್ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಗಲ್ಲಾಪೆಟ್ಟಿಗೆ ವ್ಯವಹಾರ ಅತ್ಯುತ್ತಮವಾಗಿ ಸಾಗಿದೆ.
ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ನಟನೆಯ 'ಛಾವಾ' ಚಿತ್ರವು ಎರಡನೇ ಭಾನುವಾರ ಅಂದರೆ ತನ್ನ 10ನೇ ದಿನದಂದು ಬರೋಬ್ಬರಿ 40 ಕೋಟಿ ರೂಪಾಯಿಗಳ (ಆರಂಭಿಕ ಅಂದಾಜು) ವ್ಯವಹಾರ ನಡೆಸಿದೆ. ಈ ಮೂಲಕ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 326.75 ಕೋಟಿ ರೂ.ಗಳನ್ನು ಗಳಿಸಿದೆ. ಜಾಗತಿಕ ಕಲೆಕ್ಷನ್ ಗಮನಿಸಿದರೆ 400 ಕೋಟಿಯತ್ತ ಗುರಿಯಿಟ್ಟಿದೆ.
ಇತ್ತೀಚೆಗೆ ಛಾವಾ ಚಿತ್ರದ ನಿರ್ಮಾಪಕರು ಸಾಮಾಜಿಕ ಜಾಲತಾಣದಲ್ಲಿ 9 ದಿನಗಳ ಒಟ್ಟು ದೇಶೀಯ ಗಳಿಕೆ ಹಂಚಿಕೊಂಡಿದ್ದರು. ಚಿತ್ರ 9 ದಿನಗಳಲ್ಲಿ 293.40 ಕೋಟಿ ರೂ. ಕಲೆಕ್ಷನ್ ಮಾಡಿದೆ. ವಿಕ್ಕಿ ಕೌಶಲ್ ಅವರ ವೃತ್ತಿಜೀವನ ಗಮನಿಸೋದಾದರೆ, ಭಾರತದಲ್ಲಿ 300 ಕೋಟಿ ರೂ.ಗಳ ಗಡಿ ದಾಟಿದ ಅವರ ಮೊದಲ ಚಿತ್ರವಿದು.