ಆ್ಯಕ್ಷನ್ ಸಿನಿಮಾಗಳಿಗೆ ಜನಪ್ರಿಯರಾಗಿರುವ ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ನೂತನ ಸಂಸತ್ ಭವನಕ್ಕೆ ಭೇಟಿ ನೀಡಿದ್ದರು. ನಿರ್ದೇಶಕರು ತಮ್ಮ ವಿಡಿಯೋವನ್ನು ಹಂಚಿಕೊಂಡಿದ್ದು, ಹೊಸ ಸಂಸತ್ತಿನ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ರೋಹಿತ್ ಶೆಟ್ಟಿಗೂ ಮೊದಲು, ಆಯುಷ್ಮಾನ್ ಖುರಾನಾ ಮತ್ತು ಜಾಕಿ ಭಗ್ನಾನಿ ಕೂಡ ಭೇಟಿ ನೀಡಿದ್ದರು.
ಹಲವು ಯಶಸ್ವಿ ಸಿನಿಮಾಗಳು, ರಿಯಾಲಿಟಿ ಶೋಗಳ ಮೂಲಕ ಗಮನ ಸೆಳೆದಿರುವ ರೋಹಿತ್ ಶೆಟ್ಟಿ ಇಂದು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ತಮ್ಮ ವಿಡಿಯೋ ಶೇರ್ ಮಾಡಿದ್ದಾರೆ. ಈ ದೃಶ್ಯದಲ್ಲಿ ದೇಶದ ಹೊಸ ಸಂಸತ್ತಿನ ಒಂದು ನೋಟವಿದೆ. ಇಡೀ ಸಂಸತ್ ಅನ್ನು ಒಂದು ರೌಂಡ್ ಹೊಡೆದ ಬಾಲಿವುಡ್ನ ಖ್ಯಾತ ನಿರ್ದೇಶಕರು ಮಾಹಿತಿ ಪಡೆದುಕೊಳ್ಳುತ್ತಿರುವುದನ್ನು ಕಾಣಬಹುದು. ಪೋಸ್ಟ್ ಶೇರ್ ಮಾಡಿದ ರೋಹಿತ್ ಶೆಟ್ಟಿ, 'ನವ ಭಾರತದ ನೂತನ ಸಂಸತ್ ಭವನ. ಇದು ಕೇವಲ ಪಾರ್ಲಿಮೆಂಟ್ ಅಲ್ಲ. ಸಂಪೂರ್ಣ ಭಾರತ. ಈ ಬಗ್ಗೆ ಹೆಮ್ಮೆ ಮತ್ತು ಗೌರವದ ಭಾವನೆ ಮೂಡುತ್ತಿದೆ' ಎಂದು ಬರೆದುಕೊಂಡಿದ್ದಾರೆ.
ಇನ್ನು ಸಿನಿಮಾ ವಿಚಾರ ಗಮನಿಸುವುದಾದರೆ, ರೋಹಿತ್ ಶೆಟ್ಟಿ ಅವರ ಮುಂದಿನ ಆ್ಯಕ್ಷನ್ ಪ್ರೊಜೆಕ್ಟ್ 'ಸಿಂಗಮ್ ಎಗೈನ್'. ಸಿಂಗಮ್ ಭಾಗ 3ರ ಸಲುವಾಗಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಬಹುನಿರೀಕ್ಷಿತ ಸಿನಿಮಾ ಆಗಸ್ಟ್ 15 ರಂದು ಚಿತ್ರಮಂದಿರ ಪ್ರವೇಶಿಸಲಿದೆ. ಅಂದೇ ಸೌತ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಪುಷ್ಪ 2: ದಿ ರೂಲ್' ಕೂಡ ಬಿಡುಗಡೆ ಆಗಲಿದೆ. ಬಾಕ್ಸ್ ಆಫೀಸ್ ಪೈಪೋಟಿ ಪಕ್ಕಾ ಅಂತಿದ್ದಾರೆ ಅಭಿಮಾನಿಗಳು.